ವಾರಾಣಸಿ(ಉತ್ತರಪ್ರದೇಶ): ಸತತ 3ನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಗಂಗಾ ಸ್ನಾನ ಮಾಡಿ ಅಸ್ಸಿ ಘಾಟ್ನಲ್ಲಿನ ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನಾ ದಿನವಾದ ಸೋಮವಾರ ವಾರಾಣಸಿ ತಲುಪಿರುವ ಮೋದಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು, ಬಳಿಕ ಬೃಹತ್ ರೋಡ್ ಶೋ ನಡೆಸಿದರು. ಆರು ಕಿ.ಮೀವರೆಗೂ ನಡೆದ ರೋಡ್ ಶೋನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ಶುಭಗಳಿಗೆಯಲ್ಲಿ ಮೋದಿ ನಾಮಪತ್ರ: ಇಂದು ಬೆಳಗ್ಗೆ 11.40ಕ್ಕೆ ಪ್ರಧಾನಿ ನರೇಂದ್ರ ದಾಮೋದರ್ದಾಸ್ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಗಂಗಾ ಸಪ್ತಮಿ ಆಗಿರುವುದರಿಂದ ಬಹಳ ವಿಶೇಷವಾದ ದಿನವಾಗಿರಲಿದೆ ಮತ್ತು ಇದರ ಹೊರತಾಗಿ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥ ಸಿದ್ಧಿ ಯೋಗದೊಂದಿಗೆ ಭೌಮ ಪುಷ್ಯ ನಕ್ಷತ್ರದ ಸಂಯೋಗವಿದೆ. ನಂಬಿಕೆಗಳ ಪ್ರಕಾರ, ಈ ದಿನ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ.
ನಾಮಪತ್ರ ಸಲ್ಲಿಕೆಯಲ್ಲಿ 12 ಸಿಎಂಗಳು ಭಾಗಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಮಪತ್ರ ಸಲ್ಲಿಕೆ ದಿನ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 12 ಬಿಜೆಪಿ ಆಡಳಿತ ಮತ್ತು ಮೈತ್ರಿ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ವರದಿ ಮಾಡಿವೆ. ಮಾಹಿತಿ ಪ್ರಕಾರ, ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ, ರಾಜಸ್ಥಾನ ಸಿಎಂ ಭಜನ್ ಲಾಲ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಹರಿಯಾಣದ ನೈಯಬ್ ಸಿಂಗ್ ಸೈನಿ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಇದಲ್ಲದೇ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಾಥ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.