ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಮೋದಿ ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. 2019ರ ಲೋಕಸಭಾ ಚುನಾವಣೆ ಮುಗಿದ ತಕ್ಷಣ ಅವರು ಇದೇ ರೀತಿ ಕೇದಾರನಾಥ ದೇಗುಲಕ್ಕೆ ಭೇಟಿ ನೀಟಿದ್ದರು. ಈ ವೇಳೆ ಕೆಲವು ಗಂಟೆಗಳ ಕಾಲ ಅಲ್ಲಿಯೇ ಧ್ಯಾನಕ್ಕೆ ಕುಳಿತಿದ್ದರು. ಅದರಂತೆ ಈ ಬಾರಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೇ 30ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಎರಡು ದಿನಗಳ ಕಾಲ ಧ್ಯಾನನಸ್ಥ ಸ್ಥಿತಿಗೆ ಹೋಗಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಪಾರ್ವತಿ ದೇವಿ - ಗೌತಮ ಬುದ್ಧ- ವಿವೇಕಾನಂದ: ಇದೊಂದು ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಸ್ಥಳ ಕೂಡ ಹೌದು. ಪಾರ್ವತಿ ದೇವಿಯು ಕನ್ಯಾಕುಮಾರಿಯಲ್ಲಿ ಶಿವನನ್ನು ಕಾಯುತ್ತಾ ಒಂದೇ ಪಾದದ ಮೇಲೆ ಧ್ಯಾನ ಮಾಡಿದ ಸ್ಥಳವೇ ಈ ಪುಣ್ಯಭೂಮಿ ಎಂದು ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ಗೌತಮ ಬುದ್ಧನ ಜೀವನದಲ್ಲಿ ಸಾರನಾಥ ಸ್ತೂಪ ಎಷ್ಟು ಮುಖ್ಯವೋ, ಸ್ವಾಮಿ ವಿವೇಕಾನಂದರ ಜೀವನದಲ್ಲಿ ಕನ್ಯಾಕುಮಾರಿ ರಾಕ್ ಸ್ಮಾರಕವೂ ಅಷ್ಟೇ ಮುಖ್ಯವಾಗಿದೆ. ಇಲ್ಲಿ ಧ್ಯಾನ ಮಾಡಿದ ಬಳಿಕ ಸ್ವಾಮಿ ವಿವೇಕಾನಂದರಿಗೆ ತಮ್ಮ ಶಕ್ತಿಯ ಬಗ್ಗೆ ಅರಿವಾಯಿತು ಎಂಬ ಪ್ರತೀತಿ ಕೂಡ ಇದೆ. ಬಂಡೆಯೊಂದರ ಮೇಲೆ ಧ್ಯಾನದಲ್ಲಿ ಕುಳಿತಾಗ ಭಾರತ ಮಾತೆಯ ದರ್ಶನ ಪಡೆದ ಸ್ವಾಮಿ ವಿವೇಕಾನಂದರು, ಬಳಿಕ ಭಾರತ ನಿರ್ಮಾಣಕ್ಕೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದು ಇದೇ ಜಾಗದಲ್ಲಿ ಎಂಬ ಮಾತು ಕೂಡ ಇದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಈ ಬಾರಿ ಧ್ಯಾನ ಮಾಡಲು ಸ್ವಾಮಿ ವಿವೇಕಾನಂದ ರಾಕ್ ಸ್ಮಾರಕವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಮ್ಮ ದೇಶದಲ್ಲಿ ವಿಶೇಷ ಸ್ಥಾನ: ನಮ್ಮ ದೇಶದಲ್ಲಿ ಕನ್ಯಾಕುಮಾರಿಗೆ ವಿಶೇಷ ಸ್ಥಾನವಿದೆ. ಇದು ಭಾರತದ ದಕ್ಷಿಣದ ತುದಿಯಾಗಿದೆ. ನಮ್ಮ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳ ಕೂಡ ಕನ್ಯಾಕುಮಾರಿ ಆಗಿದೆ. ಕನ್ಯಾಕುಮಾರಿ ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸಂಗಮ ಸ್ಥಾನ ಕೂಡ ಹೌದು. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಅನೇಕ ಪ್ರವಾಸಿಗರು ಕನ್ಯಾಕುಮಾರಿಗೆ ಬರುತ್ತಾರೆ. ಎರಡು ದಿನಗಳ ಕಾಲ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡುವ ಮೂಲಕ ದೇಶದ ಏಕತೆಯನ್ನು ಪ್ರದರ್ಶಿಸಲು ಪ್ರಧಾನಿ ಮೋದಿ ಬಯಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಗುಹೆಯಲ್ಲಿ ಧ್ಯಾನ: 2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಈ ಹಿಂದೆ 2014ರ ಚುನಾವಣೆ ವೇಳೆ ಮೋದಿ ಶಿವಾಜಿ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ದೇಶದ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯು ಜೂನ್ 1 ರಂದು ಅಂತಿಮ ಹಂತದ ಮತದಾನದೊಂದಿಗೆ ಕೊನೆಗೊಳ್ಳಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.