ಗುವಾಹಟಿ : ಅಸ್ಸಾಂನಲ್ಲಿ 11,600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಗುವಾಹಟಿಯ ಖಾನಪಾರಾದ ಪಶುವೈದ್ಯಕೀಯ ಕಾಲೇಜು ಆಟದ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ಧನಸಹಾಯದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಅನೇಕ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಈ ಸಂದರ್ಭದಲ್ಲಿ ಚಾಲನೆ ನೀಡಿದರು.
498 ಕೋಟಿ ರೂ. ವೆಚ್ಚದ ಕಾಮಾಕ್ಯ ದೇವಾಲಯದ ಕಾರಿಡಾರ್, 358 ಕೋಟಿ ರೂ. ವೆಚ್ಚದ ಗುವಾಹಟಿಯ ಹೊಸ ವಿಮಾನ ನಿಲ್ದಾಣ ಟರ್ಮಿನಲ್ನಿಂದ ಆರು ಪಥದ ರಸ್ತೆ, ನೆಹರೂ ಕ್ರೀಡಾಂಗಣವನ್ನು ಫಿಫಾ ಮಾನದಂಡಗಳಿಗೆ ಮೇಲ್ದರ್ಜೆಗೇರಿಸುವ 831 ಕೋಟಿ ರೂ. ವೆಚ್ಚದ ಕಾಮಗಾರಿ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
'ಅಸ್ಸೋಂ ಮಾಲಾ' ರಸ್ತೆಗಳ ಎರಡನೇ ಆವೃತ್ತಿಗೂ ಪ್ರಧಾನಿ ಚಾಲನೆ ನೀಡಿದರು. 38 ಕಾಂಕ್ರೀಟ್ ಸೇತುವೆಗಳೊಂದಿಗೆ 43 ಹೊಸ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಮಿಸುವ ಒಟ್ಟು 3,444 ಕೋಟಿ ರೂ. ವೆಚ್ಚದ ಕಾಮಗಾರಿಗಳು ಇದರಲ್ಲಿವೆ. ಇದಲ್ಲದೆ 3,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮಗ್ರ ಹೊಸ ಕಟ್ಟಡಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
578 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಉದ್ದೇಶಿತ ಕರೀಂಗಂಜ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಗುವಾಹಟಿಯಲ್ಲಿ 297 ಕೋಟಿ ರೂ.ಗಳ ಯುನಿಟಿ ಮಾಲ್ಗೆ ಕೂಡ ಶಂಕುಸ್ಥಾಪನೆ ನೆರವೇರಿಸಲಾಯಿತು. 1,451 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಿಸ್ವಾನಾಥ್ ಚರಿಯಾಲಿಯಿಂದ ಗೋಹ್ಪುರದವರೆಗೆ ಚತುಷ್ಪಥ ರಸ್ತೆ ಮತ್ತು 592 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಡೋಲಾಬಾರಿಯಿಂದ ಜಮುಗುರಿವರೆಗಿನ ಮತ್ತೊಂದು ಚತುಷ್ಪಥ ರಸ್ತೆಯನ್ನು ಮೋದಿ ಉದ್ಘಾಟಿಸಿದರು.
ಶನಿವಾರ ಸಂಜೆ ಇಲ್ಲಿಗೆ ಆಗಮಿಸಿದ ಮೋದಿ ರಾತ್ರಿ ನಗರದ ಕೊಯಿನಾಧಾರ ರಾಜ್ಯ ಅತಿಥಿ ಗೃಹದಲ್ಲಿ ತಂಗಿದರು. ರಾತ್ರಿ ಬಿಜೆಪಿಯ ರಾಜ್ಯ ಕೋರ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಪಕ್ಷದ ವ್ಯವಹಾರಗಳ ಬಗ್ಗೆ ಪ್ರದಾನಿ ಚರ್ಚಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್, ರಾಜ್ಯ ಸಚಿವ ರಂಜೀತ್ ಕುಮಾರ್ ದಾಸ್, ರಾಜ್ಯ ಬಿಜೆಪಿ ಅಧ್ಯಕ್ಷ ಭಬೇಶ್ ಕಲಿಯಾ ಮತ್ತು ಇತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು ಎಂದು ಅವರು ಹೇಳಿದರು.
ಇದನ್ನೂ ಓದಿ : ಬರಲಿದೆ ಆ್ಯಪಲ್ ಸೆಲ್ಫ್ ಡ್ರೈವಿಂಗ್ ಕಾರು: ಬೆಲೆ 1 ಲಕ್ಷ ಡಾಲರ್ಗಿಂತ ಕಡಿಮೆ!