ಗಂಡೇರ್ಬಲ್: ಜಮ್ಮು ಮತ್ತು ಕಾಶ್ಮೀರ ಟನಲ್, ಸೇತುವೆ ಮತ್ತು ರೋಪ್ವೇಗಳ ಹಬ್ ಆಗುತ್ತಿದ್ದು, ಜಗತ್ತಿನ ಅತಿ ಎತ್ತರ ಟನಲ್, ರೈಲ್ ರೋಡ್ ಸೇತುವೆ ಹಾಗೂ ರೈಲ್ ಲೇನ್ಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸೋನಾ ಮಾರ್ಗ್ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಝಡ್- ಮೋರ್ಹಾ ಟನಲ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಈ ಟನಲ್ ನಿರ್ಮಾಣ ಸಮಯದಲ್ಲಿ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಏಳು ಮಂದಿಗೆ ಗೌರವ ನಮನವನ್ನು ಸಲ್ಲಿಸಿದರು. ಕಷ್ಟದ ಸಂದರ್ಭದಲ್ಲಿ ನಮ್ಮ ಸಹೋದರರು ಜೀವನವನ್ನೇ ಅಪಾಯಕ್ಕೆ ಇರಿಸಿ, ದೇಶದ ಪ್ರಗತಿ ಕಾರ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇಂದು ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಜೀವ ತ್ಯಾಗ ಮಾಡಿದ್ದ ಆ ಏಳು ಸಹೋದ್ಯೋಗಿಗಳನ್ನು ಸ್ಮರಿಸುವುದಾಗಿ ಪ್ರಧಾನಿ ತಿಳಿಸಿದರು.
ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ಧೇನೆ: ಇಂದು ನಾನು ನಿಮ್ಮ ನಡುವೆ ಸೇವಕನಾಗಿ ಬಂದಿದ್ದೇನೆ. ಕೆಲವು ದಿನಗಳ ಹಿಂದೆ ಜಮ್ಮುವಿನಲ್ಲಿ ರೈಲ್ವೆ ವಿಭಾಗಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಇಂದು ಬಹುಬೇಡಿಕೆಯ ಸೋನಾ ಮಾರ್ಗ್ ಟನಲ್ ಅನ್ನು ದೇಶಕ್ಕೆ ಸಮಪರ್ಣೆ ಮಾಡುವ ಅವಕಾಶ ಸಿಕ್ಕಿದೆ. ಈ ಟನಲ್ ಜಮ್ಮು ಮತ್ತು ಕಾಶ್ಮೀರದ ನಡುವಿನ ಸಂಚಾರ ಮಾರ್ಗವನ್ನು ಸುಗಮಗೊಳಿಸುತ್ತದೆ. ಎಲ್ಲರ ಜೊತೆ ಎಲ್ಲರ ವಿಕಾಸ ಎಂಬ ಗುರಿಯೊಂದಿಗೆ ಸರ್ಕಾರ ನಿರಂತರ ಕೆಲಸ ಮಾಡಲು ಬದ್ಧವಾಗಿದೆ. ಈ ಆಶಯ ಈಡೇರಿಸುವ ಸಲುವಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಲಾಗುತ್ತಿದೆ ಎಂದರು.
ಕಾಶ್ಮೀರ ಭಾರತದ ಮುಕುಟವಾಗಿದೆ. ಈ ಮುಕುಟ ಹೆಚ್ಚು ಹೊಳೆಯಬೇಕು ಎಂಬುದು ನನ್ನ ಆಸೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಜನರು ನನಗೆ ಇಚ್ಛೆ ಪೂರ್ಣಗೊಳ್ಳಲು ಸಹಾಯ ಮಾಡುತ್ತಾರೆ. ಈ ಮಾರ್ಗದಲ್ಲಿ ಇನ್ಮುಂದೆ ರೋಡ್ ಬ್ಲಾಕ್ ಆಗುತ್ತದೆ ಎಂಬ ಚಿಂತೆ ಇಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಇದೇ ವೇಳೆ ಪ್ರಧಾನಿ ಕಣಿವೆಯ ಜನರಿಗೆ ಅಭಯ ನೀಡಿದರು.
ನಾನು ಇಲ್ಲಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸೋನ್ಮಾರ್ಗ್, ಗುಲ್ಮಾರ್ಗ್, ಗಂಡೇರ್ಬಲ್ ಮತ್ತು ಬಾರಾಮುಲ್ಲಾದಲ್ಲಿ ಕಾರ್ಯ ನಿರ್ವಹಿಸುವಾಗ ತುಂಬಾ ಹಿಮ ಬೀಳುತ್ತಿತ್ತು. ಆದರೆ, ಇಂದು ಜಮ್ಮು ಮತ್ತು ಕಾಶ್ಮೀರದ ಜನರ ಆತ್ಮೀಯತೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ಅನುಭವ ಆಗಿಲ್ಲ. ಇಂದು ಅದ್ಬುತ ದಿನವಾಗಿದ್ದು, ಕೋಟ್ಯಂತರ ಜನರು ಉತ್ತರ ಪ್ರದೇಶದಲ್ಲಿ ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ. ಪಂಜಾಬ್ದಲ್ಲಿ ಲಾಹೋರಿ ಸಂಭ್ರಮವಿದೆ. ಇದು ಇಲ್ಲಿನ ಚಿಲ್ಲೈ ಕಾಲನ್ ಸಮಯವೂ ಆಗಿದ್ದು, ಕಾಶ್ಮೀರ ಜನರಲ್ಲಿ ನಗು ಮೂಡಿಸಿದೆ. ದೇಶದ ವಿವಿಧ ಮೂಲೆಗಳಿಂದ ಸೋನ್ ಮಾರ್ಗ್ಗೆ ಬರುವ ಜನರು ಇಲ್ಲಿನ ಆತಿಥ್ಯ ಸಂಭ್ರಮಿಸುತ್ತಾರೆ ಎಂದರು.
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಎಂದ ಪ್ರಧಾನಿ: ಒಮರ್ ಅಬ್ಧುಲ್ಲಾ ಅವರು ರಾಜ್ಯಸ್ಥಾನಮಾನದ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಯಾವಾಗಲೂ ಭರವಸೆಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲದಲ್ಲೂ ಸರಿಯಾದ ಸಮಯ ಬರಬೇಕು. ಪ್ರತಿಯೊಂದು ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರು. (ಐಎಎನ್ಎಸ್)
ಇದನ್ನೂ ಓದಿ: ಕಾಶ್ಮೀರದಲ್ಲಿಂದು ಝಡ್-ಮೋರ್ಹಾ ಸುರಂಗ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ: ಇದರ ವಿಶೇಷತೆಗಳಿವು