ನವದದೆಹಲಿ: ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚನಾವಣೆಯಲ್ಲಿ ಬಹುಮತದೊಂದಿಗೆ ಮತ್ತೊಮ್ಮೆ ಗೆಲುವು ಸಾಧಿಸಿರುವ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ದೂರವಾಣಿ ಕರೆ ಮಾಡಿರುವ ಮೋದಿ ಶೂಭಾಶಯ ಕೋರುವುದರ ಜೊತೆಗೆ ರಷ್ಯಾ - ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡಲು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುವಂತೆ ಪುನರುಚ್ಛರಿಸಿದರು.
ಇಬ್ಬರೂ ನಾಯಕರು ದೂರವಾಣಿ ಸಂಭಾಷಣೆಯಲ್ಲಿ ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ ಹಾಗೂ ರಷ್ಯಾದ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದರು.
ಪುಟಿನ್ ಅವರ ಪುನರಾಯ್ಕೆಗೆ ಅಭಿನಂದನೆಗಳನ್ನು ತಿಳಿಸಿದ ಪ್ರಧಾನಿ ಮೋದಿ, ರಷ್ಯಾದ ಸ್ನೇಹಪರ ಜನರ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಗಾಗಿ ಹಾರೈಸಿದರು. ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳನ್ನು ಮಾಡಲು ಉಭಯ ನಾಯಕರು ಒಪ್ಪಿಕೊಂಡರು. ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ಕುರಿತು ಚರ್ಚಿಸುವ ವೇಳೆ, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗದ ಪರವಾಗಿ ಭಾರತದ ಸ್ಥಿರವಾದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಛರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಅಧ್ಯಕ್ಷರ ಮಾತುಕತೆಯ ವಿವರವನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. "ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿ, ಅಧ್ಯಕ್ಷರಾಗಿ ಪುನರಾಯ್ಕೆ ಆಗಿರುವುದಕ್ಕೆ ಅಭಿನಂದಿಸಿದೆ. ಮುಂದಿನ ವರ್ಷಗಳಲ್ಲಿ ಭಾರತ-ರಷ್ಯಾ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಸೋಮವಾರ, ಪ್ರಧಾನಿ ಮೋದಿ, ರಷ್ಯಾದ ಅಧ್ಯಕ್ಷ ಪುಟಿನ್ ಅವರು ಮರು ಆಯ್ಕೆಯಾದ ಹಿನ್ನೆಲೆ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಅಭಿನಂದನೆ ಸಲ್ಲಿಸಿದ್ದರು. ಭಾರತ ಹಾಗೂ ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಜನರ- ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದರು.
ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಅವರು ಶೇ. 87ರಷ್ಟು ಪಡೆದು, ಜಯ ಗಳಿಸಿದರು. ಈ ಮೂಲಕ ಮತ್ತೆ ರಷ್ಯಾದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದರು.
ಇದನ್ನೂ ಓದಿ: ರಷ್ಯಾ ಅಧ್ಯಕ್ಷೀಯ ಚುನಾವಣೆ: ಶೇ.87ರಷ್ಟು ಮತ ಪಡೆದು ಮತ್ತೆ ಗದ್ದುಗೆಗೇರಿದ ಪುಟಿನ್