ನವದೆಹಲಿ: ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣದ ವೇಳೆ ಅಸ್ವಸ್ಥರಾದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಿರಿಯ ನಾಯಕನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಸ್ರೋಟಾ ಬೆಲ್ಟ್‌ನಲ್ಲಿ ಭಾನುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥರಾದರು. ತಕ್ಷಣವೇ ವೇದಿಕೆ ಮೇಲಿದ್ದವರು ಕೈ ಹಿಡಿದುಕೊಂಡು ಆರೈಕೆ ಮಾಡಿದರು.
PM Modi (@narendramodi) called on Congress president Mallikarjun Kharge (@kharge) and enquired about his health. Earlier today, Kharge became unwell while addressing a public rally in the Jasrota belt of Jammu and Kashmir's Kathua district. pic.twitter.com/GXjgM4HWew
— Press Trust of India (@PTI_News) September 29, 2024
ಭಾಷಣ ಮುಂದುವರಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ನೀರು ಕುಡಿದು ತುಸು ಹೊತ್ತು ಸುಧಾರಿಸಿಕೊಂಡ ಬಳಿಕ ಭಾಷಣ ಮುಂದುವರಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಖರ್ಗೆ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಲಾಗಿದ್ದು, ಸದ್ಯ ಅವರ ಆರೋಗ್ಯ ಉತ್ತಮವಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಅಬ್ಬರಿಸಿದ ಖರ್ಗೆ: ಹಠಾತ್ತನೆ ಅಸ್ವಸ್ಥರಾಗಿ, ಬಳಿಕ ಚೇತರಿಸಿಕೊಂಡ ಖರ್ಗೆ ಅವರು ಮಾತು ಮುಂದುವರಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದರು.
#WATCH | Jammu and Kashmi: Congress President Mallikarjun Kharge became unwell while addressing a public gathering in Kathua. pic.twitter.com/OXOPFmiyUB
— ANI (@ANI) September 29, 2024
"ನಾವು ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ಆದರೆ ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ" ಎಂದರು.
ಆರೋಗ್ಯದ ಬಗ್ಗೆ ಪುತ್ರ ಪ್ರಿಯಾಂಕ್ ಸ್ಪಷ್ಟನೆ: ಚುನಾವಣಾ ಪ್ರಚಾರದ ವೇಳೆ ಖರ್ಗೆ ಅವರ ಅಸ್ವಸ್ಥರಾದ ಬಗ್ಗೆ ಪುತ್ರ, ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಅಸ್ವಸ್ಥರಾಗಿದ್ದರು. ಸದ್ಯ ಅವರು ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
Congress President Sri @kharge felt slightly unwell while addressing a public meeting in Jasrota, Jammu & Kashmir.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 29, 2024
He has been checked upon by his medical team and apart from slightly low blood pressure, he is doing well.
Extremely grateful for everyone's concern.
His…
ವೈದ್ಯಕೀಯ ತಂಡವು ಖರ್ಗೆ ಅವರನ್ನು ಪರೀಕ್ಷಿಸಿದೆ. ರಕ್ತದೊತ್ತಡ ಕಡಿಮೆಯಾಗಿತ್ತು. ಹೀಗಾಗಿ ಅವರು ಮಾತನಾಡುವ ವೇಳೆ ವಿಚಲಿತರಾಗಿದ್ದರು ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆಯು 90 ಸದಸ್ಯ ಬಲವನ್ನು ಹೊಂದಿದ್ದು, ಸೆಪ್ಟೆಂಬರ್ 18, 25 ರಂದು ಮೊದಲೆರಡು ಹಂತದ ಮತದಾನ ನಡೆದಿದೆ. ಅಕ್ಟೋಬರ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: 'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning