ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ದಿಢೀರ್ ರಾಜೀನಾಮೆ, ಇನ್ನೊಬ್ಬ ಆಯುಕ್ತರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಗಳ ಭರ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಮಿತಿಯು ಮಾರ್ಚ್ 15 ರಂದು ಸಭೆ ಸೇರಿ, ಆಯುಕ್ತರನ್ನು ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ.
ಅಂದು ನಡೆಯುವ ಸಭೆಯಲ್ಲಿ ಹೊಸ ಚುನಾವಣಾ ಆಯುಕ್ತರ ನೇಮಕದ ಕುರಿತು ಚರ್ಚೆ ನಡೆಯಲಿದೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಾರ್ಚ್ 15 ರೊಳಗೆ ಇಬ್ಬರು ಆಯುಕ್ತರ ನೇಮಕವಾಗುವ ಸಾಧ್ಯತೆಯೂ ಇದೆ.
ಆಯುಕ್ತರಾದ ಅರುಣ್ ಗೋಯೆಲ್ ಅವರು ವೈಯಕ್ತಿಕ ಕಾರಣ ಸೂಚಿಸಿ ದಿಢೀರ್ ರಾಜೀನಾಮೆ ನೀಡಿದ್ದರು. ಅನುಪ್ ಚಂದ್ರ ಪಾಂಡೆ ಅವರು ಕಳೆದ ತಿಂಗಳಷ್ಟೇ ನಿವೃತ್ತಿ ಹೊಂದಿದ್ದಾರೆ. ಇದರಿಂದ ಇಬ್ಬರು ಆಯುಕ್ತರ ಹುದ್ದೆಗಳು ಖಾಲಿ ಉಳಿದಿವೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾತ್ರ ಆಯೋಗದಲ್ಲಿದ್ದಾರೆ.
ವಿಪಕ್ಷ ನಾಯಕರೂ ಭಾಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಇಬ್ಬರು ಕೇಂದ್ರ ಸಚಿವರು, ವಿಪಕ್ಷ ನಾಯಕ, ಗೃಹ ಕಾರ್ಯದರ್ಶಿ, ಸಿಬ್ಬಂದಿ ಇಲಾಖೆ ಕಾರ್ಯದರ್ಶಿಗಳು ಇರಲಿದ್ದಾರೆ. ಈಗಾಗಲೇ ಐದು ಜನರನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಸಮಿತಿಯು ಇಬ್ಬರು ಆಯುಕ್ತರ ಹೆಸರನ್ನು ಆಯ್ಕೆ ಮಾಡಲಿದೆ. ಬಳಿಕ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ಅವರ ನೇಮಕವನ್ನು ರಾಷ್ಟ್ರಪತಿಗಳು ಮಾಡಲಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕರಾಗಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಭಾಗವಹಿಸಲಿದ್ದಾರೆ.
ಇದಕ್ಕೂ ಮೊದಲು ಆಯುಕ್ತ ಪಾಂಡೆ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನದ ಭರ್ತಿಗಾಗಿ ಮಾರ್ಚ್ 7 ರಂದು ಆಯ್ಕೆ ಸಮಿತಿ ಸಭೆ ನಡೆಯಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ ಗೋಯಲ್ ಅವರು ರಾಜೀನಾಮೆ ನೀಡಿದ್ದು, ಎರಡೂ ಸ್ಥಾನಗಳಿಗೆ ಮಾರ್ಚ್ 15 ಒಳಗೆ ನೇಮಕಾತಿ ಮಾಡಲು ಮಾರ್ಚ್ 13 ಅಥವಾ 14 ರಂದು ಆಯ್ಕೆ ಸಮಿತಿ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.
ಆಯುಕ್ತರ ನೇಮಕಕ್ಕೆ ತಿದ್ದುಪಡಿ: ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರ ನೇಮಕದ ಕುರಿತು ಹೊಸ ಕಾನೂನು ಜಾರಿ ತರಲಾಗಿದೆ. ಇದಕ್ಕೂ ಮೊದಲು ಚುನಾವಣಾ ಆಯುಕ್ತರನ್ನು ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಿದ್ದರು. ಸಂಪ್ರದಾಯದಂತೆ ಹಿರಿಯ ಅಧಿಕಾರಿಯನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗುತ್ತಿತ್ತು. ಹೊಸ ನಿಯಮದಂತೆ ಪ್ರಧಾನಿಗಳ ನೇತೃತ್ವದಲ್ಲಿ ವಿಪಕ್ಷ ನಾಯಕ, ಇಬ್ಬರು ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ಆಯುಕ್ತರ ನೇಮಕ ಮಾಡಬೇಕಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ವೇಳಾ ಪಟ್ಟಿ ಪ್ರಕಟಕ್ಕೂ ಮುನ್ನವೇ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ