ಗಯಾ(ಬಿಹಾರ): ಇಲ್ಲಿನ ಗಯಾಧಾಮದಲ್ಲಿ ಸೆ.17 ರಿಂದ ಪಿತೃಪಕ್ಷ ಆರಂಭವಾಗಲಿದೆ. ಲಕ್ಷಾಂತರ ಯಾತ್ರಾರ್ಥಿಗಳು ಪಿತೃ ಪಕ್ಷದಂದು ಇಲ್ಲಿಗೆ ಬಂದು ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮಾಡುತ್ತಾರೆ. ಆದರೆ, ಗಯಾಧಾಮದಲ್ಲಿ ಒಂದು ಬಲಿಪೀಠವಿದೆ ಅಲ್ಲಿ ಜನರು ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ಮಾಡುವುದಿಲ್ಲ, ಬದಲಿಗೆ ತಮಗೇ ತಾವೇ ಪಿಂಡ ಪ್ರದಾನ ಮಾಡಿಕೊಳ್ಳುತ್ತಾರೆ.
ಬದುಕಿದ್ದಾಗಲೇ ಪಿಂಡ ಪ್ರದಾನ ಮಾಡುತ್ತಿರುವುದೇಕೆ?: ಹೌದು, ವಿಶ್ವವಿಖ್ಯಾತ ಗಯಾಧಾಮದಲ್ಲಿ ನಡೆಯುವ ಪಿತೃ ಪಕ್ಷಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಇಲ್ಲೊಂದು ಆಲಯವಿದ್ದು, ಜನರು ಮೋಕ್ಷ ಪಡೆಯಲು ತಮ್ಮದೇ ಶ್ರಾದ್ಧ ಮಾಡಿಕೊಳ್ಳುತ್ತಾರೆ. ಸಾಧುಗಳು, ಸನ್ಯಾಸಿಗಳು ಮತ್ತು ತಮ್ಮ ಕುಟುಂಬದಿಂದ ದೂರಾದವರು ಹಾಗೂ ಮಕ್ಕಳಿಲ್ಲದವರು ತಮ್ಮ ಪಿಂಡವನ್ನು ತಾವೇ ಪ್ರದಾನ ಮಾಡಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.
ಜನಾರ್ದನನ ರೂಪದಲ್ಲಿರುವ ವಿಷ್ಣು: ಈ ದೇವಾಲಯದಲ್ಲಿ ವಿಷ್ಣು, ಜನಾರ್ದನನ ರೂಪದಲ್ಲಿದ್ದಾನೆ. ಕಪ್ಪು ಕಲ್ಲಿನ ಕೆತ್ತಲಾದ ಜನಾರ್ದನನ ವಿಗ್ರಹವು ಆತ್ಮವನ್ನು ಸ್ವೀಕರಿಸುವ ಭಂಗಿಯಲ್ಲಿರುವುದು ವಿಶೇಷ. ವಿಷ್ಣುವಿಗೆ ಪಿಂಡವನ್ನು ಅರ್ಪಿಸಿದರೆ ಸ್ವೀಕರಿಸುತ್ತಾನೆ ಮತ್ತು ಪಿಂಡವನ್ನು ಪ್ರದಾನ ಮಾಡಿದ ವ್ಯಕ್ತಿ ಮರಣದ ನಂತರ ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
ಈ ದೇವಾಲಯ ಐತಿಹಾಸಿಕ ಹಿನ್ನೆಲೆ ಹೊಂದಿದೆ; ಈ ದೇವಾಲಯ(ಪಿಂಡ್ವೇದಿ) ಭಕ್ತರ ಇಷ್ಟಾರ್ಥ ಈಡೇರಿಕೆಗೂ ಹೆಸರುವಾಸಿಯಾಗಿದೆ. ಈ ಆಲಯವು ಪಿಂಡ್ವೇದಿಯ ರೂಪದಲ್ಲಿದೆ. ಇಂತಹ ದೇವಾಲಯ ಜಗತ್ತಿನಲ್ಲಿ ಎಲ್ಲೂ ಇಲ್ಲ. ಸಾಧುಗಳು, ಸನ್ಯಾಸಿಗಳು ಮತ್ತು ಮಕ್ಕಳಿಲ್ಲದವರು ತಮ್ಮ ಪಿಂಡ ಪ್ರದಾನ ಮಾಡಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ ಎಂದು ಇಲ್ಲಿನ ಅರ್ಚಕರಾದ ಆಕಾಶ್ ಗಿರಿ, ಪ್ರಭಾಕರ್ ಕುಮಾರ್ ಹೇಳುತ್ತಾರೆ.
"ಈ ದೇವಾಲಯವು ಪಿಂಡ್ವೇದಿಯ ರೂಪದಲ್ಲಿದೆ. ಇದು ಐತಿಹಾಸಿಕ ದೇವಾಲಯವಾಗಿದೆ. ಪುರಾಣಗಳಲ್ಲಿ ಇದರ ಮಹತ್ವವನ್ನು ಉಲ್ಲೇಖಿಸಲಾಗಿದೆ. ಮೋಕ್ಷವನ್ನು ನೀಡುವ ಭಗವಾನ್ ವಿಷ್ಣುವು ಇಲ್ಲಿ ಜನಾರ್ದನನ ರೂಪದಲ್ಲಿದ್ದಾರೆ. ಆತ್ಮ ಪಿಂಡ ದಾನವನ್ನು ನಡೆಸಲಾಗುತ್ತದೆ. ಇಲ್ಲಿ ತಮ್ಮ ಪಿಂಡ ಪ್ರದಾನ ಮಾಡಿಕೊಳ್ಳುವವರಿಗೆ ಮರಣದ ನಂತರ ದೇವರು ಮೋಕ್ಷ ನೀಡುತ್ತಾನೆ" ಎಂದು ಅರ್ಚಕ ಆಕಾಶ್ ಗಿರಿ ಹೇಳಿದರು.
"ಈ ದೇವಾಲಯದ ಮಹತ್ವವನ್ನು ಪುರಾಣಗಳಲ್ಲಿ ವಿವರಿಸಲಾಗಿದೆ. ರಾಜಾ ಮಾನ್ಸಿಂಗ್ ಈ ದೇವಾಲ ಜೀರ್ಣೋದ್ಧಾರ ಮಾಡಿದ್ದರು. ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ರಾಜಾ ಮಾನ್ಸಿಂಗ್ ನಂತರ ಈ ದೇವಾಲಯವನ್ನು ಯಾರೂ ಜೀರ್ಣೋದ್ಧಾರ ಮಾಡದ ಕಾರಣ ದೇವಾಲಯ ಶಿಥಿಲಗೊಂಡಿದೆ" ಎಂದು ಅರ್ಚಕ ಪ್ರಭಾಕರ ಕುಮಾರ್ ತಿಳಿಸಿದರು.