ಹೈದರಾಬಾದ್: ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನವು ಮೇ 25ರಂದು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ನಡೆಯಲಿದೆ. ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿದ್ದು, ಶುಕ್ರವಾರ ಸಂಜೆ ಚುನಾವಣಾ ಸಿಬ್ಬಂದಿ ಮತಯಂತ್ರಗಳ ಸಮೇತವಾಗಿ ತಮ್ಮ ಮತಗಟ್ಟೆಗಳಿಗೆ ತೆರಳಿದರು.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-1.jpg)
ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಮತ್ತು ಪಶ್ಚಿಮ ಬಂಗಾಳದ 58 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರಕ್ಕೂ ಶನಿವಾರ ಮತದಾನ ನಡೆಯಲಿದೆ. ಈ ಕ್ಷೇತ್ರಕ್ಕೆ ಮೂರನೇ ಹಂತದಲ್ಲೇ ಮತದಾನ ನಿಗದಿಯಾಗಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಚುನಾವಣೆಯನ್ನು ಆರನೇ ಹಂತಕ್ಕೆ ಮುಂದೂಡಲಾಗಿದೆ.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-2.jpg)
ಕಣದಲ್ಲಿ 889 ಅಭ್ಯರ್ಥಿಗಳು: ಶನಿವಾರ ಮತದಾನ ನಡೆಯುವ 58 ಕ್ಷೇತ್ರಗಳ ಈ ಪೈಕಿ 49 ಕ್ಷೇತ್ರಗಳು ಸಾಮಾನ್ಯ ವರ್ಗ, 2 ಕ್ಷೇತ್ರಗಳು ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು 7 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಾಗಿದೆ. ಅಂತಿಮ ಕಣದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದು, 11.13 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು ಮತ್ತು 5,120 ತೃತೀಯಲಿಂಗಿಗಳು ಸೇರಿದ್ದಾರೆ.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-4.jpg)
1.14 ಲಕ್ಷ ಮತಗಟ್ಟೆಗಳು: ಎಲ್ಲ 58 ಲೋಕಸಭೆ ಕ್ಷೇತ್ರಗಳಲ್ಲಿ 1.14 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಸುಮಾರು 11.4 ಲಕ್ಷ ಮತಗಟ್ಟೆ ಅಧಿಕಾರಿಗಳು ನಿಯೋಜಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ಸೌಲಭ್ಯಗಳನ್ನು ಚುನಾವಣಾ ಆಯೋಗ ಕಲ್ಪಿಸಲಿದೆ.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-7.jpg)
ಶಾಂತಿಯುತ, ಸುಗಮವಾಗಿ ಚುನಾವಣೆ ನಡೆಸಲು 184 ವೀಕ್ಷಕರನ್ನು (66 ಸಾಮಾನ್ಯ ವೀಕ್ಷಕರು, 35 ಪೊಲೀಸ್ ವೀಕ್ಷಕರು, 83 ವೆಚ್ಚ ವೀಕ್ಷಕರು) ಆಯೋಗ ನೇಮಿಸಿದೆ. ಇವರುಗಳು ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚುವರಿಯಾಗಿ ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನೂ ಆಯೋಗ ನಿಯೋಜಿಸಿದೆ.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-6.jpg)
ಇದಲ್ಲದೆ, ಒಟ್ಟು 2,222 ಫ್ಲೈಯಿಂಗ್ ಸ್ಕ್ವಾಡ್‌ಗಳು, 2,295 ಕಣ್ಗಾವಲು ತಂಡಗಳು, 819 ವಿಡಿಯೋ ಕಣ್ಗಾವಲು ತಂಡಗಳು ಮತ್ತು 569 ವಿಡಿಯೋ ವೀಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಗಡಿ ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಅಕ್ರಮ ಮದ್ಯ, ಡ್ರಗ್ಸ್, ನಗದು ಸಾಗಾಟದ ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ.
![PHASE 6 OF LOK SABHA POLLS](https://etvbharatimages.akamaized.net/etvbharat/prod-images/24-05-2024/21551634_thum1-5.jpg)
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರ?
- ಬಿಹಾರದಲ್ಲಿ 8 ಕ್ಷೇತ್ರಗಳು - ವಾಲ್ಮೀಕಿ ನಗರ, ಪಶ್ಚಿಮ ಚಂಪರಂ, ಪೂರ್ವಿ ಚಂಪಾರಣ್, ಶೆಯೋಹರ್, ವೈಶಾಲಿ, ಗೋಪಾಲ್‌ಗಂಜ್, ಸಿವಾನ್ ಮತ್ತು ಮಹಾರಾಜ್‌ಗಂಜ್.
- ಹರಿಯಾಣದ ಎಲ್ಲ 10 ಕ್ಷೇತ್ರಗಳು - ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್ ಮತ್ತು ಫರಿದಾಬಾದ್.
- ಜಾರ್ಖಂಡ್‌ನ 4 ಕ್ಷೇತ್ರಗಳು - ಗಿರಿಧ್, ಧನ್‌ಬಾದ್, ರಾಂಚಿ ಮತ್ತು ಜಮ್‌ಶೆಡ್‌ಪುರ.
- ಒಡಿಶಾದ 6 ಕ್ಷೇತ್ರಗಳು - ಸಂಬಲ್‌ಪುರ, ಕಿಯೋಂಜಾರ್, ಧೆಂಕನಲ್, ಕಟಕ್, ಪುರಿ ಮತ್ತು ಭುವನೇಶ್ವರ್.
- ಉತ್ತರ ಪ್ರದೇಶದ 14 ಕ್ಷೇತ್ರಗಳು - ಸುಲ್ತಾನ್‌ಪುರ, ಫುಲ್‌ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ಡೊಮ್ರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್‌ಗಂಜ್, ಅಜಂಗಢ, ಜೌನ್‌ಪುರ್, ಮಚ್ಲಿಶಹರ್, ಭದೋಹಿ ಮತ್ತು ಪ್ರತಾಪ್‌ಗಢ್.
- ಪಶ್ಚಿಮ ಬಂಗಾಳದ 8 ಕ್ಷೇತ್ರಗಳು - ತಮ್ಲುಕ್, ಕಂಠಿ, ಘಟಾಲ್, ಜಾರ್‌ಗ್ರಾಮ್, ಮೇದಿನಿಪುರ, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್
- ದೆಹಲಿಯ ಎಲ್ಲ 7 ಕ್ಷೇತ್ರಗಳು - ಚಾಂದಿನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ.
- ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಏಕೈಕ ಸ್ಥಾನಕ್ಕೆ ಮತದಾನ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು: ಆರನೇ ಹಂತದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಅನಂತನಾಗ್-ರಜೌರಿದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ, ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಕಣದಲ್ಲಿದ್ದಾರೆ.
ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನಾಯಕರಾದ ದೀಪೇಂದರ್ ಸಿಂಗ್ ಹೂಡಾ, ರಾಜ್ ಬಬ್ಬರ್ ಮತ್ತು ಕನ್ಹಯ್ಯಾ ಕುಮಾರ್ ಸೇರಿದ್ದಾರೆ. ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಕನ್ಹಯ್ಯಾ ಕುಮಾರ್ ಸ್ಪರ್ಧಿಸುತ್ತಿದ್ದರೆ, ಹರಿಯಾಣದ ರೋಹ್ಟಕ್‌ನಿಂದ ಹೂಡಾ ಚುನಾವಣೆ ಎದುರಿಸುತ್ತಿದ್ದಾರೆ. ಖ್ಯಾತ ನಟ ರಾಜ್ ಬಬ್ಬರ್ ಗುರುಗಾಂವ್ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕಿ ಮೇನಕಾ ಗಾಂಧಿ, ಒಡಿಶಾದಲ್ಲಿ ಸಂಬಲಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪರ್ಧೆ ಮಾಡಿದ್ದಾರೆ.