ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಈಗಿರುವಂತೆ ಸ್ಥಿರವಾಗಿ ಮುಂದುವರೆದಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಲಾಭದ ಮಾರ್ಜಿನ್ ಉತ್ತಮವಾಗುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2 ರಿಂದ 3 ರೂಪಾಯಿ ಕಡಿಮೆಯಾಗಬಹುದು ಎಂದು ಜಾಗತಿಕ ಆರ್ಥಿಕ ರೇಟಿಂಗ್ ಏಜೆನ್ಸಿ ಐಸಿಆರ್ಎ ಹೇಳಿದೆ.
ಕಚ್ಚಾ ತೈಲ ಬೆಲೆಗಳ ಇಳಿಕೆಯೊಂದಿಗೆ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ವಾಹನ ಇಂಧನಗಳ ಚಿಲ್ಲರೆ ಮಾರಾಟದ ಮಾರುಕಟ್ಟೆ ಮಾರ್ಜಿನ್ ಇತ್ತೀಚಿನ ವಾರಗಳಲ್ಲಿ ಸುಧಾರಿಸಿದೆ. ಕಚ್ಚಾ ತೈಲ ಬೆಲೆಗಳು ಪ್ರಸ್ತುತ ಮಟ್ಟದಲ್ಲಿ ಸ್ಥಿರವಾಗಿದ್ದರೆ ಚಿಲ್ಲರೆ ಇಂಧನ ಬೆಲೆಗಳನ್ನು ಇಳಿಸಲು ಅವಕಾಶವಿದೆ ಎಂದು ರೇಟಿಂಗ್ ಏಜೆನ್ಸಿ ನಿರೀಕ್ಷಿಸಿದೆ.
"ಸೆಪ್ಟೆಂಬರ್ 2024 ರಲ್ಲಿ (ಸೆಪ್ಟೆಂಬರ್ 17 ರವರೆಗೆ) ಅಂತರರಾಷ್ಟ್ರೀಯ ಕಚ್ಚಾತೈಲ ಬೆಲೆಗಳಿಗೆ ಹೋಲಿಸಿದರೆ ಒಎಂಸಿಗಳ ನಿವ್ವಳ ಆದಾಯವು ಪೆಟ್ರೋಲ್ಗೆ ಲೀಟರ್ಗೆ 15 ರೂ ಮತ್ತು ಡೀಸೆಲ್ ಲೀಟರ್ಗೆ 12 ರೂ ಹೆಚ್ಚಾಗಿದೆ ಎಂದು ಐಸಿಆರ್ಎ ಅಂದಾಜಿಸಿದೆ" ಎಂದು ಐಸಿಆರ್ಎ ಎಸ್ವಿಪಿ ಮತ್ತು ಕಾರ್ಪೊರೇಟ್ ರೇಟಿಂಗ್ಸ್ ಗ್ರೂಪ್ ಹೆಡ್ ಗಿರೀಶ ಕುಮಾರ್ ಕದಮ್ ಹೇಳಿದ್ದಾರೆ.
ಐಸಿಆರ್ಎ ಪ್ರಕಾರ, ಈ ಇಂಧನಗಳ ಚಿಲ್ಲರೆ ಮಾರಾಟ ಬೆಲೆ (ಆರ್ಎಸ್ಪಿ) ಮಾರ್ಚ್ 2024 ರಿಂದ ಬದಲಾಗದೆ ಉಳಿದಿದೆ (ಮಾರ್ಚ್ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್ಗೆ 2 ರೂ.ಗಳನ್ನು ಕಡಿಮೆ ಮಾಡಲಾಗಿತ್ತು) ಮತ್ತು ಕಚ್ಚಾ ತೈಲ ಬೆಲೆಗಳು ಸ್ಥಿರವಾಗಿದ್ದರೆ ಈಗ ಮತ್ತೆ ಈ ಇಂಧನಗಳ ಬೆಲೆಗಳನ್ನು ಲೀಟರ್ಗೆ 2 ರಿಂದ 3 ರೂ.ಗಳಷ್ಟು ಕಡಿಮೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.
ಮತ್ತೊಂದು ಪ್ರಮುಖ ರೇಟಿಂಗ್ ಏಜೆನ್ಸಿ ಸಿಎಲ್ಎಸ್ಎ ಕೂಡ ಇದೇ ರೀತಿಯ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು, ಅಕ್ಟೋಬರ್ 5 ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ. ಮುಖ್ಯವಾಗಿ ದುರ್ಬಲ ಜಾಗತಿಕ ಆರ್ಥಿಕ ಬೆಳವಣಿಗೆ, ಯುಎಸ್ನಲ್ಲಿ ಹೆಚ್ಚುವರಿ ಕಚ್ಚಾ ತೈಲ ಉತ್ಪಾದನೆ ಮತ್ತು ಒಪೆಕ್ + ತನ್ನ ಉತ್ಪಾದನಾ ಕಡಿತವನ್ನು ಎರಡು ತಿಂಗಳವರೆಗೆ ಹಿಂತೆಗೆದುಕೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿವೆ. ಚೀನಾದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿ ಹೆಚ್ಚಳ, ಉದ್ಯಮದ ಬೇಡಿಕೆ ಕುಸಿತ ಮತ್ತು ರಿಯಲ್ ಎಸ್ಟೇಟ್ ಕುಸಿತಗಳು ಕೂಡ ಇಂಧನದ ಬೇಡಿಕೆ ಕುಗ್ಗಲು ಕಾರಣವಾಗಿವೆ.
ಭಾರತದಲ್ಲಿ ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕೆಂಟ್ಸ್ (ಪಿಒಎಲ್) ಬಳಕೆಯು ಹಣಕಾಸು ವರ್ಷ 2024 ರಲ್ಲಿ ಶೇಕಡಾ 5 ರಷ್ಟು ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ಪ್ರಗತಿ, ಹೆಚ್ಚುತ್ತಿರುವ ಪ್ರಯಾಣ ಮತ್ತು ವಿಮಾನ ಪ್ರಯಾಣ ಕಾರಣದಿಂದ ಹಣಕಾಸು ವರ್ಷ 2025 ರಲ್ಲಿ ಇಂಧನ ಬೇಡಿಕೆ ಶೇಕಡಾ 3 ರಿಂದ 4 ರಷ್ಟು ಬೆಳವಣಿಗೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಅನ್ಲಿಮಿಟೆಡ್ ಕರೆ, ಉಚಿತ ಡೇಟಾ, 56 ದಿನ ವ್ಯಾಲಿಡಿಟಿ! BSNL ಸೂಪರ್ ರೀಚಾರ್ಜ್ ಪ್ಲಾನ್ - BSNL Best Recharge Plan