ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥಾಪಕ, ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್ ಮುಂದೆ ಮತ್ತೊಮ್ಮೆ ಕ್ಷಮೆ ಕೋರುವ ಪ್ರಸ್ತಾಪ ಮುಂದಿಟ್ಟರು. ಈ ಹಿಂದೆ ಎರಡು ಬಾರಿ ನ್ಯಾಯಪೀಠದೆದುರು ಇಬ್ಬರೂ ಕ್ಷಮೆ ಕೋರಿದ್ದರು. ಆದರೆ, ಅದನ್ನು ನ್ಯಾಯಪೀಠ ತಿರಸ್ಕರಿಸಿತ್ತು. ಇದೀಗ, ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವುದಾಗಿ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ವಿವಿಧ ಕಾಯಿಲೆಗಳನ್ನು ಗುಣಮುಖಗೊಳಿಸುವ ಬಗ್ಗೆ ತಪ್ಪುದಾರಿಗೆಳೆಯುವ ಪತಂಜಲಿ ಜಾಹೀರಾತು ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಂಗ ನಿಂದನೆ ಪ್ರಕರಣದ ಅರ್ಜಿ ವಿಚಾರಣೆ ವೇಳೆ ಇಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ.ಅಮಾನುಲ್ಲಾ ಅವರನ್ನೊಳಗೊಂಡ ಪೀಠದ ಮುಂದೆ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾದರು. ನ್ಯಾ.ಕೊಹ್ಲಿ ಅವರು ರಾಮ್‌ದೇವ್ ಅವರನ್ನು ಉದ್ದೇಶಿಸಿ, ''ಯೋಗವನ್ನು ಉತ್ತೇಜಿಸಲು ನೀವು ಮಾಡಿದ ಕೆಲಸವನ್ನು ನ್ಯಾಯಾಲಯ ಗೌರವಿಸುತ್ತದೆ. ಆದರೆ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಧುನಿಕ ವೈದ್ಯಕೀಯ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಕೀಳಾಗಿಸುವುದು ಮತ್ತು ಅದನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ, ''ನ್ಯಾಯಾಲಯವು 2023ರ ನವೆಂಬರ್ನಲ್ಲಿ ನೀಡಿದ ಆದೇಶದ ನಂತರ ಪತ್ರಿಕಾಗೋಷ್ಠಿ ನಡೆಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ'' ಎಂದು ನ್ಯಾಯಪೀಠವು ರಾಮ್‌ದೇವ್ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿತು. ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಿಗಿ, ''ನಾವು ಬೇಷರತ್ ಕ್ಷಮೆಯಾಚಿಸುತ್ತಿದ್ದೇವೆ ಎಂದು ರಾಮದೇವ್ ಹೇಳಿದ್ದಾರೆ. ಯಾರನ್ನಾದರೂ ನೋಯಿಸುವುದು ಅಥವಾ ಅವಹೇಳನ ಮಾಡುವುದು ಅಥವಾ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದು ಅವರ ಉದ್ದೇಶವಾಗಿಲ್ಲ'' ಎಂದು ತಿಳಿಸಿದರು.
ಮುಂದುವರೆದು, ''ವಾಸ್ತವವಾಗಿ ಸಾಕ್ಷ್ಯಾಧಾರಿತ ಪುರಾವೆಗಳನ್ನು ಅವರು ಹೊಂದಿದ್ದು, ಕ್ಲಿನಿಕಲ್ ಪುರಾವೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರು ಇದನ್ನೆಲ್ಲಾ ಹೇಳಬಾರದಿತ್ತು'' ಎಂದು ರೋಹ್ಟಿಗಿ ಹೇಳಿದರು. ಈ ಸಂದರ್ಭದಲ್ಲಿ ''ಇದು ಪುನರಾವರ್ತನೆಯಾಗದಂತೆ ಪ್ರತಿಯೊಂದನ್ನೂ ನೋಡಿಕೊಳ್ಳುವುದಾಗಿ'' ರಾಮ್‌ದೇವ್ ನ್ಯಾಯಪೀಠಕ್ಕೆ ಭರವಸೆ ನೀಡಿದರು. ಇದೇ ವೇಳೆ, ''ನಮ್ಮ ಬಳಿ ಕ್ಲಿನಿಕಲ್ ಸಾಕ್ಷ್ಯಗಳಿವೆ'' ಎಂದು ರಾಮ್‌ದೇವ್ ಹೇಳುತ್ತಿದ್ದಂತೆ, ಜೊತೆಗಿದ್ದ ಬಾಲಕೃಷ್ಣ ''ಹೌದು'' ಎಂದರು. ಮತ್ತೊಂದೆಡೆ, ''ಆದರೂ ನಾವು ಕ್ಷಮೆಯಾಚಿಸುತ್ತಿದ್ದೇವೆ'' ಎಂದು ರಾಮ್‌ದೇವ್ ಸ್ಪಷ್ಟಪಡಿಸಿದರು.
ನ್ಯಾ.ಅಮಾನುಲ್ಲಾ, ''ಇತರ ವೈದ್ಯಕೀಯ ಪದ್ಧತಿಗಳನ್ನು ಕೆಡಿಸಲು ಸಾಧ್ಯವಿಲ್ಲ'' ಎಂದು ಹೇಳಿದರು. ಆಗ ರಾಮ್‌ದೇವ್, ''ನಾನು ಉತ್ಸಾಹದಲ್ಲಿ ಆಯುರ್ವೇದ ಮತ್ತು ಅಲೋಪತಿಯ ಹೋಲಿಕೆ ಮಾಡಿದ್ದೇನೆ. ಇದು ಪುನರಾವರ್ತನೆಯಾಗುವುದಿಲ್ಲ'' ಎಂದರು. ಈ ವೇಳೆ, ಕ್ಷಮಾಪಣೆಯನ್ನು ಸ್ವೀಕರಿಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸಿಲ್ಲ'' ಎಂದು ಪೀಠವು ರಾಮ್‌ದೇವ್ ಅವರಿಗೆ ತಿಳಿಸಿತು. ಆಗ ರಾಮ್‌ದೇವ್, ''ನನ್ನನ್ನು ಹಲವಾರು ಸಾವಿರ ಜನರು ಅನುಸರಿಸುತ್ತಿದ್ದಾರೆಂದು ನನಗೆ ಗೊತ್ತಿದೆ. ಭವಿಷ್ಯದಲ್ಲಿ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ'' ಎಂದರು. ಇದಕ್ಕೆ ನ್ಯಾಯಪೀಠವು, ''ಅಲೋಪತಿಯನ್ನು ಕೆಡಿಸಬಾರದು'' ಎಂದು ಪುನರುಚ್ಚರಿಸಿ, "ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ" ಎಂದು ಒತ್ತಿಹೇಳಿತು.
ಅಲ್ಲದೇ, ''ನಿಮ್ಮನ್ನು ಕ್ಷಮಿಸಬೇಕೇ ಅಥವಾ ಬೇಡವೇ ಎಂದು ನಾವು ನಿರ್ಧರಿಸಿಲ್ಲ. ಇವರು ಒಂದಕ್ಕಿಂತ ಹೆಚ್ಚು ಬಾರಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ್ದಾರೆ'' ಎಂದು ನ್ಯಾಯಪೀಠ ತಿಳಿಸಿತು. ಆಗ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರನ್ನು ಪ್ರತಿನಿಧಿಸುವ ವಕೀಲರು, ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳುವುದಾಗಿ ಮತ್ತು ವಿಚಾರಣೆಯ ಸಂದರ್ಭದಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ನ್ಯಾಯ ಪೀಠದ ಮುಂದೆ ಒಂದು ವಾರ ಕಾಲಾವಕಾಶ ಕೋರಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಕೋರ್ಟ್ ಮುಂದೂಡಿತು. ಅಷ್ಟೇ ಅಲ್ಲ, ''ರಾಮ್‌ದೇವ್ ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಇರುವಷ್ಟು ಮುಗ್ಧರಲ್ಲ. ಈ ಕ್ಷಣದಲ್ಲಿ ಅವರು ಕೊಕ್ಕೆಯಿಂದ ಹೊರಗುಳಿದಿದ್ದಾರೆ ಎಂದು ನಾವು ಹೇಳುತ್ತಿಲ್ಲ'' ಎಂದು ಎಚ್ಚರಿಸಿತು.
ಇದನ್ನೂ ಓದಿ: 'ನ್ಯಾಯಾಲಯ ಕುರುಡಲ್ಲ': ರಾಮದೇವ್ ಬಾಬಾಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್