ತ್ರಿಶೂರ್ (ಕೇರಳ): ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ರೈಲು ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಚಲಿಸುತ್ತಿದ್ದ ರೈಲಿನಿಂದ ತಳ್ಳಿರುವ ಆಘಾತಕಾರಿ ಘಟನೆ ಇಂದು ಸಂಜೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಮೃತ ರೈಲ್ವೆ ಅಧಿಕಾರಿಯನ್ನು ಕೆ.ವಿನೋದ್ ಎಂದು ಗುರುತಿಸಲಾಗಿದೆ. ಒಡಿಶಾ ಮೂಲದ ರಜನಿಕಾಂತ್ ಎಂಬಾತನೇ ಕೃತ್ಯ ಎಸಗಿದ್ದು, ಈತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಎರ್ನಾಕುಲಂ-ಪಾಟ್ನಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರೋಪಿ ರಜನಿಕಾಂತ್ ಪ್ರಯಾಣಿಸುತ್ತಿದ್ದ. ಎರ್ನಾಕುಲಂನಿಂದ ಸಂಜೆ 5:30ಕ್ಕೆ ಹೊರಟಿದ್ದ ರೈಲು 7 ಗಂಟೆಗೆ ತ್ರಿಶೂರ್ಗೆ ತಲುಪಿತ್ತು. ಎಸ್ 11 ಕೋಚ್‌ನಲ್ಲಿ ರಜನಿಕಾಂತ್ ಮದ್ಯ ಸೇವಿಸಿ ಟಿಕೆಟ್ ಇಲ್ಲದೆ ಕುಡಿದು ಪ್ರಯಾಣಿಸುತ್ತಿದ್ದ. ಪರಿಶೀಲನೆಗೆ ಬಂದ ಟಿಟಿಇ ಕೆ. ವಿನೋದ್ ಟಿಕೆಟ್ ಇಲ್ಲದೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಆರೋಪಿ ರಜನಿಕಾಂತ್ ಟಿಟಿ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಅಲ್ಲದೇ, ಏಕಾಏಕಿ ಟಿಟಿ ವಿನೋದ್ ಅವರನ್ನು ರೈಲಿನಿಂದ ತಳ್ಳಿದ್ದಾನೆ. ಪರಿಣಾಮ ಕೆಳಗಡೆ ಬಿದ್ದ ಅವರ ದೇಹದ ಮೇಲೆ ಮತ್ತೊಂದು ರೈಲು ಹಾದು ಹೋಗಿದೆ. ಹೀಗಾಗಿ ವಿನೋದ್ ದುರಂತ ಸಾವು ಕಂಡಿದ್ದಾರೆ. ದುರುಳ ರಜನಿಕಾಂತ್ ವಲಸೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ತಕ್ಷಣವೇ ಆರೋಪಿಯನ್ನು ಪಾಲಕ್ಕಾಡ್‌ನಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಎರ್ನಾಕುಲಂ ಮೂಲದ ಕೆ.ವಿನೋದ್ ಆರಂಭದಲ್ಲಿ ರೈಲ್ವೆ ಇಲಾಖೆಗೆ ತಾಂತ್ರಿಕ ಸಿಬ್ಬಂದಿಯಾಗಿ ಸೇರಿದ್ದರು. ಸುಮಾರು ಇಪ್ಪತ್ತು ವರ್ಷಗಳಿಂದ ಸೇವೆಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆಯಷ್ಟೇ ಟಿಟಿಇ ಆಗಿ ನೇಮಕಗೊಂಡಿದ್ದರು. ವಿನೋದ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ವಿವಿಧ ಚಿತ್ರಗಳಲ್ಲಿ ಸಣ್ಣ ಪೊಲೀಸ್ ಪಾತ್ರಗಳ ಮೂಲಕ ತಮ್ಮ ನಟನಾ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಜೊತೆಗೆ ರೈಲ್ವೆ ನೌಕರರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: ಶಾಲಾ ಪ್ರವಾಸದ ಬಸ್ ಪಲ್ಟಿ; ನಾಲ್ವರು ಮಕ್ಕಳು ಸಾವು - School Bus Accident