ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ 70ಕ್ಕೂ ಅಧಿಕ ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಶ್ರೀನಗರದ 15 ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿನ ವಿದೇಶಿ ಉಗ್ರರ ಅಂಕಿ-ಅಂಶಗಳನ್ನು ಡಿಜಿಪಿ ಆರ್.ಆರ್.ಸ್ವೈನ್ ನೀಡಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಂದು ಜನರಲ್ ಬಿಪಿನ್ ರಾವತ್ ಸ್ಟೇಡಿಯಂನಲ್ಲಿ ಕಾರ್ಗಿಲ್ ಯುದ್ಧ ಯೋಧರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್ ಘಾಯ್, ಡಿಜಿಪಿ ನೀಡಿರುವ ಮಾಹಿತಿಯಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯ ವಿದೇಶಿ ಭಯೋತ್ಪಾದಕರ ಸಂಖ್ಯೆಯು 70ರಿಂದ 80 ರಷ್ಟಿದೆ. ಹೀಗಾಗಿ ಭದ್ರತಾ ಪಡೆಗಳು ಈಗ ತಮ್ಮ ಗಮನವನ್ನು ಸ್ಥಳೀಯ ಉಗ್ರರಿಂದ ವಿದೇಶಿ ಭಯೋತ್ಪಾದಕರ ಮೇಲೂ ದೃಷ್ಟಿ ನೆಟ್ಟಿವೆ ಎಂದು ತಿಳಿಸಿದರು.
ಎಲ್ಲ ಭದ್ರತಾ ಪಡೆಗಳು ಈ ವಿದೇಶಿ ಭಯೋತ್ಪಾದಕರು ಸದೆಬಡಿಯಲು ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಲೆಫ್ಟಿನೆಂಟ್ ಜನರಲ್ ಹೇಳಿದರು. ಇದೇ ವೇಳೆ, ದಕ್ಷಿಣ ಕಾಶ್ಮೀರದಲ್ಲಿ ದೀರ್ಘಕಾಲ ಬೀಡುಬಿಟ್ಟಿದ್ದ ಎಲ್‌ಇಟಿ ಕಮಾಂಡರ್ ರಿಯಾಜ್ ದಾರ್ ಹತ್ಯೆಯ ಕುರಿತು ಪ್ರತಿಕ್ರಿಯಿಸಿ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಯಶಸ್ವಿಯಾಗಿದೆ. ಸದ್ಯ ಕಾಶ್ಮೀರದ ಎಲ್‌ಒಸಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ಸೇನೆಯ ಹಿಮಾಲಯನ್ ರೆಜಿಮೆಂಟ್ ಬಗ್ಗೆ ಶ್ಲಾಘಿಸಿದ ಅವರು, ಈ ರೆಜಿಮೆಂಟ್ ಕಾರ್ಗಿಲ್ ಯುದ್ಧದ ಸಮಯದಲ್ಲಿ ಶತ್ರುಗಳಿಗೆ ತಕ್ಕಶಾಸ್ತಿ ಮಾಡಿತ್ತು ಎಂದು ಸ್ಮರಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಘಾಯ್, ಕಣಿವೆ ನಾಡಿನಲ್ಲಿ ಭದ್ರತಾ ಪರಿಸ್ಥಿತಿ ಸ್ಥಿರವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಮುಂದುವರೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. (IANS)
ಇದನ್ನೂ ಓದಿ: ಒಂದೇ ರನ್ವೇ; ಸೆಕೆಂಡ್ಗಳಲ್ಲೇ ಒಂದು ವಿಮಾನ ಟೇಕ್ ಆಫ್, ಮತ್ತೊಂದು ಲ್ಯಾಂಡಿಂಗ್! ತಪ್ಪಿದ ಅನಾಹುತ