ಕಟಕ್(ಒಡಿಶಾ): 2023ರ ಜೂನ್ನಲ್ಲಿ ನಡೆದಿದ್ದ ಬಹನಾಗಾ ತ್ರಿವಳಿ ರೈಲು ಅಪಘಾತದಲ್ಲಿ ಸುಮಾರು 300 ಪ್ರಯಾಣಿಕರು ಸಾವು ಮತ್ತು 700 ಮಂದಿ ಗಾಯಕ್ಕೆ ಕಾರಣವಾದ ಆರೋಪದಲ್ಲಿ ಸಿಬಿಐ ಬಂಧನಕ್ಕೆ ಒಳಗಾಗಿದ್ದ ಮೂವರು ಆರೋಪಿಗಳಿಗೆ ಒಡಿಶಾ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿಗಳಾದ ಹಿರಿಯ ಸೆಕ್ಷನ್ ಇಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಎಂ.ಡಿ. ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ಸಿಬಿಐ ಬಂಧನಕ್ಕೆ ಒಳಗಾಗಿದ್ದ ಮೂವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದಿತ್ಯ ಕುಮಾರ್ ಮೊಹಪಾತ್ರ ಅವರ ಏಕಸದಸ್ಯ ಪೀಠವು, ತಲಾ 50 ಸಾವಿರ ರೂಪಾಯಿ ಮತ್ತು ಎರಡು ಪ್ರಮುಖ ಶ್ಯೂರಿಟಿಗಳೊಂದಿಗೆ ಜಾಮೀನು ನೀಡಿದೆ.
ಕೋರ್ಟ್ನ ಷರತ್ತುಗಳು: ಜಾಮೀನು ಮಂಜೂರು ಮಾಡಲು ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿದೆ. ಆರೋಪಿತ ರೈಲ್ವೆ ಅಧಿಕಾರಿಗಳು ಅಪಘಾತ ಸಂಭವಿಸಿದ ಅದೇ ವಿಭಾಗದಲ್ಲಿ ಮತ್ತೆ ಕೆಲಸಕ್ಕೆ ಸೇರಬಾರದು. ಸಾಕ್ಷ್ಯನಾಶದಂತಹ ಕೃತ್ಯಗಳನ್ನು ಎಸಗಬಾರದು ಎಂದಿದೆ.
ಇದಲ್ಲದೇ, ಆರೋಪಿಗಳು ಪ್ರಕರಣದ ವಿಚಾರಣೆಯ ಪ್ರತಿ ದಿನಾಂಕದಂದು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು, ಹೆಚ್ಚಿನ ವಿಚಾರಣೆಗಾಗಿ ಪ್ರಕರಣದ ತನಿಖಾಧಿಕಾರಿ (ಐಒ) ಮುಂದೆ ಹಾಜರಾಗಬೇಕು. ಅವರು ಯಾವುದೇ ರೀತಿಯಲ್ಲಿ ಸಾಕ್ಷ್ಯವನ್ನು ನಾಶ ಮಾಡಬಾರದು, ಸೂಚಿಸಲಾದ ಠೇವಣಿಯನ್ನು ಕಡ್ಡಾಯವಾಗಿ ಇಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕುವುದು, ಪ್ರಭಾವ ಬೀರುವಂತಿಲ್ಲ. ದೇಶವನ್ನು ತೊರೆಯಬಾರದು. ಪಾಸ್‌ಪೋರ್ಟ್‌ಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು ಎಂದು ಆದೇಶಿಸಿದೆ.
ಈ ಮೇಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಂಥವರ ಜಾಮೀನು ತಕ್ಷಣಕ್ಕೆ ರದ್ದುಗೊಳಿಸಲಾಗುವುದು ಎಂದು ಹೈಕೋರ್ಟ್ ತನ್ನ 48 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.
ದುರಂತದ ಕಹಿನೆನಪು: ಒಡಿಶಾದ ಬಹನಾಗಾ ಬಜಾರ್ ನಿಲ್ದಾಣದ ಬಳಿ ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಪಕ್ಕದಲ್ಲಿ ನಿಂತಿದ್ದ ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹಳಿ ತಪ್ಪಿದ ಸರಕು ರೈಲಿನ ಬೋಗಿಗಳು ಪಕ್ಕದ ಟ್ರಾಕ್ಗೆ ಬಿದ್ದಿದ್ದವು. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ಸಹ ಹಳಿ ತಪ್ಪಿದ್ದು, ಸುಮಾರು 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾವಿನ ಸಂಖ್ಯೆ 300 ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಅಪಘಾತವು ಭಾರತೀಯ ರೈಲ್ವೆಯ ಇತಿಹಾಸದಲ್ಲೇ ನಾಲ್ಕನೇ ದೊಡ್ಡ ಅತಿ ದೊಡ್ಡ ಸಾವು-ನೋವಿಗೆ ಕಾರಣವಾದ ಪ್ರಕರಣವಾಗಿದೆ.
ಇದನ್ನೂ ಓದಿ: ಸೇತುವೆ ತಡೆಗೋಡೆಗೆ ರಭಸವಾಗಿ ಗುದ್ದಿದ ಬಸ್: ರಾಜಸ್ಥಾನದಲ್ಲಿ 12 ಮಂದಿ ಸಾವು