ನವದೆಹಲಿ: ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಹೊರಡಿಸಿದ ನಿರ್ದೇಶನಕ್ಕೆ ಜುಲೈ 22ರಂದು ನಿಡಿದ್ಧ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಸುಪ್ರೀಂಕೋರ್ಟ್ ವಿಸ್ತರಿಸಿದೆ. ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿಗಳ ಹೊರಗೆ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಜುಲೈ 22ರ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಬಿಜೆಪಿ ಆಡಳಿತವಿರುವ ರಾಜ್ಯಗಳು, ಕನ್ವರ್ ಯಾತ್ರೆಯ ಮಾರ್ಗಗಳಲ್ಲಿರುವ ರೆಸ್ಟೋರೆಂಟ್ ಅಥವಾ ಕೆಫೆಗಳ ಮಾಲೀಕರು, ಸಿಬ್ಬಂದಿಯ ಹೆಸರುಗಳು ಮತ್ತು ಇತರ ವಿವರಗಳನ್ನು ಪ್ರದರ್ಶಿಸಲು ಸೂಚಿಸಿದ್ದವು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ, ಹೆಸರು ಪ್ರದರ್ಶಿಸಲು ಯಾರನ್ನೂ ಒತ್ತಾಯಿಸಬಾರದು ಎಂದು ಹೇಳಿದೆ.
ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯದ ಅಂಗಡಿ ಮಾಲೀಕರ ಮೂಲ ಹಕ್ಕುಗಳ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಕನ್ವರ್ ಯಾತ್ರೆಯಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತರ ಮೂಲಭೂತ ಹಕ್ಕುಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಉತ್ತರ ಪ್ರದೇಶ ಸರ್ಕಾರದ ನಿರ್ದೇಶನವನ್ನು ಸಮರ್ಥಿಸಿಕೊಳ್ಳುವಾಗ, ತೀರ್ಥಯಾತ್ರೆ ಕೈಗೊಳ್ಳುವಾಗ ಕನ್ವಾರಿಯಾಗಳು ಮಾಂಸಾಹಾರಿ ಆಹಾರವನ್ನು ಸೇವಿಸುವುದಿಲ್ಲ. ಆದರೆ ಕೆಲವೊಮ್ಮೆ ಸಸ್ಯಾಹಾರಿ ಎಂದು ಹೇಳಿಕೊಳ್ಳುವ ಅಂಗಡಿಗಳು ಮಾಂಸಾಹಾರಿ ಆಹಾರವನ್ನು ನೀಡುತ್ತಿರುವುದು ಕಂಡುಬಂದಿದೆ ಎಂದು ವಕೀಲರು ಒತ್ತಿ ಹೇಳಿದರು.
"ಆದೇಶ ಸ್ಪಷ್ಟವಾಗಿದೆ, ಕನ್ವರ್ ಮಾರ್ಗದಲ್ಲಿ ಹೆಸರನ್ನು ಬಹಿರಂಗಪಡಿಸಲು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ರಾಯ್ ಹೇಳಿದರು. ಆದೇಶದಲ್ಲಿನ ಗೊಂದಲವನ್ನು ನಿವಾರಿಸುವಂತೆ ವಕೀಲರು ನ್ಯಾಯಪೀಠವನ್ನು ಕೋರಿದರು. ಯಾವುದೇ ಗೊಂದಲವಿಲ್ಲ ಮತ್ತು ಜುಲೈ 22 ರ ಆದೇಶದ ಬಗ್ಗೆ ನ್ಯಾಯಾಲಯವು ಯಾವುದೇ ಸ್ಪಷ್ಟೀಕರಣವನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ರಾಯ್ ಹೇಳಿದರು.
ಕೆಲವು ಮಧ್ಯಸ್ಥಿಕೆದಾರರಾದ 'ಕನ್ವರ್ ಯಾತ್ರಿಗಳ' ಪರವಾಗಿ ಹಾಜರಾದ ವಕೀಲರು, ಮಾಹಿತಿಯ ಪ್ರದರ್ಶನವು ವಿಶೇಷವಾದದ್ದಲ್ಲ ಮತ್ತು ಕನ್ವಾರಿಯಾಗಳು ತಿಳಿವಳಿಕೆಯುಳ್ಳ ಆಯ್ಕೆಯನ್ನು ಮಾಡಲು ಬಯಸುತ್ತಾರೆ ಎಂದು ಹೇಳಿದರು. ಕೆಲವು ತಿನಿಸುಗಳು ಹಿಂದೂ ದೇವರ ಹೆಸರುಗಳನ್ನು ಹೊಂದಿವೆ ಆದರೆ ಅವುಗಳ ಮಾಲೀಕರು ಮತ್ತು ಉದ್ಯೋಗಿಗಳು ವಿಭಿನ್ನ ಧರ್ಮಕ್ಕೆ ಸೇರಿದವರು ಎಂದು ವಾದಿಸಲಾಯಿತು.
ಉತ್ತರಾಖಂಡದ ಡೆಪ್ಯುಟಿ ಅಡ್ವೊಕೇಟ್ ಜನರಲ್ ಜತೀಂದರ್ ಕುಮಾರ್ ಸೇಥಿ, ಯಾತ್ರೆ ಸಂದರ್ಭದಲ್ಲಿ ರಾಜ್ಯಾದ್ಯಂತ ಕಾನೂನು ಆದೇಶವನ್ನು ಜಾರಿಗೊಳಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವು ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಕೇಂದ್ರ ಕಾನೂನು ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯಿದೆ 2006ರ ನಿಯಮಗಳ ಪ್ರಕಾರ, ಢಾಬಾಗಳು ಸೇರಿದಂತೆ ಪ್ರತಿಯೊಬ್ಬ ಆಹಾರ ಮಾರಾಟಗಾರರು ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಮತ್ತು ನ್ಯಾಯಾಲಯದ ಮಧ್ಯಂತರ ಆದೇಶವು ಈ ಕೇಂದ್ರ ಕಾನೂನಿಗೆ ಅನುಗುಣವಾಗಿಲ್ಲ ಎಂದು ವಾದಿಸಿದರು. ಹಾಗಿದ್ದಲ್ಲಿ ರಾಜ್ಯಾದ್ಯಂತ ಏಕೆ ಈ ನಿಯಮ ಜಾರಿ ಮಾಡಿಲ್ಲ ಎಂದು ಪೀಠ ಪ್ರಶ್ನಿಸಿತು.
ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಎ.ಎಂ.ಸಿಂಘ್ವಿ, ಮುಜಾಫರ್ ನಗರ ಎಸ್‌ಎಸ್‌ಪಿ ಹೊರಡಿಸಿದ ನಿರ್ದೇಶನವನ್ನು ಸಮರ್ಥಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಪ್ರತಿವಾದ ಅಫಿಡವಿಟ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದರು ಮತ್ತು ಕಳೆದ 60 ವರ್ಷಗಳಲ್ಲಿ ಇಂತಹ ಯಾವುದೇ ಆದೇಶ ಹೊರಡಿಸಲಾಗಿಲ್ಲ ಎಂದು ವಾದಿಸಿದರು.
ತಮ್ಮ ನಿರ್ದೇಶನಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮಧ್ಯಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ ಮತ್ತು ಮುಂದಿನ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: 'ಸಂವಿಧಾನ ಹತ್ಯೆ ದಿನ' ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್ - Samvidhan Hatya Diwas