ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 'ವಿಕಸಿತ ಭಾರತ' ಹೆಸರಿನಲ್ಲಿ ದೇಶ, ವಿದೇಶದ ಭಾರತೀಯರ ಜೊತೆಗೆ ಸಂಪರ್ಕ ಸಾಧಿಸುತ್ತಿರುವ ವಾಟ್ಸ್ಆ್ಯಪ್ ಸಂದೇಶದ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರತಿಪಕ್ಷಗಳು ಚುನಾವಣಾ ಆಯೋಗದ ಗಮನ ಸೆಳೆದಿವೆ.
ಕೇಂದ್ರ ಸರ್ಕಾರ ಅನಧಿಕೃತವಾಗಿ ಜನರ ಸಂಪರ್ಕ ಸಂಖ್ಯೆಗೆ ವಿಕಸಿತ ಭಾರತದ ಸಂದೇಶವನ್ನು ವಾಟ್ಸ್ಆ್ಯಪ್ ಮೂಲಕ ರವಾನಿಸುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಮಾಹಿತಿ ಪಡೆದು ಮೆಸೇಜ್ ಕಳುಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ವಿದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಪ್ರಧಾನ ಮಂತ್ರಿ ಹೆಸರಿನಲ್ಲಿ ಕಳುಹಿಸಿರುವ ವಿಕಸಿತ ಭಾರತ ಸಂದೇಶವನ್ನು ಪ್ರಸ್ತಾಪಿಸಿ, ಈ ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ಉಂಟಾಗಿದೆ. ಬಿಜೆಪಿಯು ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಸರ್ಕಾರಿ ಯಂತ್ರ ಮತ್ತು ಸರ್ಕಾರಿ ದತ್ತಾಂಶಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.
ಐಟಿ ಇಲಾಖೆಯಿಂದ ಸಂದೇಶ ರವಾನೆ?: ಮತ್ತೊಬ್ಬ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, ತಮ್ಮ ಫೋನ್‌ಗೆ ಸ್ವೀಕರಿಸಿದ ವಾಟ್ಸ್ಆ್ಯಪ್ ಸಂದೇಶವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಈ ಅನಪೇಕ್ಷಿತ ಸಂದೇಶವು ನನಗೆ ಬಂದಿದೆ. ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಿಂದ ಬಂದಂತೆ ತೋರುತ್ತಿದೆ. ಇದು ಮಾದರಿ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು, ಟಿಎಂಸಿ ಸಂಸದ ಸಾಕೇತ್ ಗೋಖಲೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ಪ್ರಚಾರ ಮಾಡುವ ಈ ವಿಕಸಿತ ಭಾರತ್ ವಾಟ್ಸ್ಆ್ಯಪ್ ಸಂದೇಶವು ದೇಶ ಮಾತ್ರವಲ್ಲ ವಿಶ್ವದಾದ್ಯಂತ ಇರುವ ಭಾರತೀಯರಿಗೆ ಸ್ಪ್ಯಾಮ್ ರೀತಿಯ ಸಂದೇಶ ರವಾನೆಯಾಗಿದೆ. ವಾಟ್ಸ್ಆಪ್ ನಂಬರ್ ಕೇಂದ್ರದ ಐಟಿ ಸಚಿವಾಲಯಕ್ಕೆ ಸೇರಿದೆ ಎಂದು ಕಾಣುತ್ತಿದೆ. ಇದರಲ್ಲಿ ಯಾವ ಡೇಟಾಬೇಸ್ ಬಳಸಲಾಗಿದೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನೀತಿ ಸಂಹಿತೆ ಜಾರಿ ಬಳಿಕವೂ ಸರ್ಕಾರವನ್ನು ಬಳಸಿಕೊಂಡು ಬಿಜೆಪಿ ಪ್ರಚಾರ ನಡೆಸುತ್ತಿರುವುದು ಅಕ್ರಮವಾಗಿದೆ. ಈ ಬಗ್ಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಬೇಕು ಎಂದು ಟಿಎಂಸಿ ನಾಯಕ ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ಗಮನ ಹೊಂದಿದೆಯೇ ಎಂದಿದ್ದಾರೆ.
ಏನಿದು ವಿಕಸಿತ ಭಾರತ ಸಂದೇಶ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಜನರಿಗೆ ವಾಟ್ಸ್ಆ್ಯಪ್ ಸಂದೇಶ ರವಾನೆಯಾಗುತ್ತಿದೆ. ಅದರಲ್ಲಿ ಆತ್ಮೀಯ ಕುಟುಂಬ ಸದಸ್ಯರೇ ಎಂದು ಸಂಬೋಧಿಸಿದ ಪ್ರಧಾನಿ ಅವರು, ನಮ್ಮ ಸರ್ಕಾರ 10 ವರ್ಷ ಮಾಡಿದ ಸಾಧನೆ ಮತ್ತು ಸರ್ಕಾರದಿಂದ ನೀವು ಏನೆಲ್ಲಾ ಪ್ರಯೋಜನೆಗಳನ್ನು ಪಡೆದುಕೊಂಡಿದ್ದೀರಿ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದಂತೆ ಮತ್ತಷ್ಟು ಪ್ರಶ್ನೆಗಳಲ್ಲಿ ಅದರಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ನಡುವೆ 'ಶಕ್ತಿ' ಸಂಘರ್ಷ