ಬಲೂರ್‌ಘಾಟ್ (ಕೋಲ್ಕತ್ತಾ): ಪಶ್ಚಿಮ ಬಂಗಾಳದ ದಿನಜ್‌ಪುರ ಜಿಲ್ಲೆಯ ಹಿಲಿ ಎಂಬಲ್ಲಿ 12 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಂಡಿರುವುದಾಗಿ ಗಡಿ ಭದ್ರತಾ ಪಡೆ ಶುಕ್ರವಾರ ತಿಳಿಸಿದೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಹಿಲಿ ಬಯಲು ಪ್ರದೇಶದಲ್ಲಿ ಈ ಪ್ರಮಾಣದ ಹಾವಿನ ವಿಷ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ತಪನ್ (51) ಎಂದು ಗುರುತಿಸಲಾಗಿದೆ. ಸದ್ಯ ಆತನಿಂದ ಹಾವಿನ ವಿಷ ಇರುವ ಹರಳಿನ ಜಾರ್ ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಆರೋಪಿಯನ್ನು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ವಶಪಡಿಸಿಕೊಂಡಿರುವ ಹಾವಿನ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಹಾವಿನ ವಿಷವನ್ನು ವಿಶೇಷ ಹರಳಿನ ಜಾರ್ನಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ಹಾವಿನ ವಿಷವನ್ನು ಬಂಧಿತ ಆರೋಪಿಯು ನೇಪಾಳದ ಮೂಲಕ ಚೀನಾಕ್ಕೆ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಗುರುವಾರ ಸಂಜೆ 5:30ಕ್ಕೆ ಬಲೂರ್ಘಾಟ್ನ ಹಿಲಿ ಎಂಬಲ್ಲಿನ ಆತನ ಮನೆ ಮೇಲೆ ದಾಳಿ ಮಾಡಿ ತಪಾಸಣೆಗೊಳಿಸಿದಾಗ ಹಾವಿನ ವಿಷದ ಬಾಟಲ್ ಸಿಕ್ಕಿದೆ. ಹಾವಿನ ವಿಷವನ್ನು ಸದ್ಯ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಮಾಹಿತಿ ಪ್ರಕಾರ ಈ ಕಳ್ಳಸಾಗಣಿಕೆಯಲ್ಲಿ ಆರೋಪಿ ತಪನ್ ಒಬ್ಬನ ಕೈವಾಡವಿಲ್ಲ. ಹಲವರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಬಲೂರ್‌ಘಾಟ್ ಅರಣ್ಯ ವಿಭಾಗದ ರೇಂಜರ್ ಸುಕಾಂತ ಓಜಾ ತಿಳಿಸಿದ್ದಾರೆ.
ಬಂಧಿತ ಆರೋಪಿಯು ಹಿಲಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿಮೋಹಿನಿ ನಿವಾಸಿಯಾಗಿದ್ದು, ಶುಕ್ರವಾರ ಆತನನ್ನು ಕೆಳ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಶಪಡಿಸಿಕೊಂಡ ಸರಕುಗಳನ್ನು ಪರೀಕ್ಷೆಯ ಉದ್ದೇಶಕ್ಕಾಗಿ ಮುಂಬೈಗೆ ಕಳುಹಿಸಲಾಗುತ್ತಿದೆ. 14 ತಿಂಗಳಿನಲ್ಲಿ ಮೂರನೇ ಪ್ರಕರಣ ಇದಾಗಿದೆ ಎಂದು ಓಜಾ ಹೇಳಿದ್ದಾರೆ.
ಸೆಪ್ಟೆಂಬರ್ 2022 ರಲ್ಲಿ, ಜಲಪೈಗುರಿ ಜಿಲ್ಲೆಯ ಅರಣ್ಯ ವಲಯದ ಅಧಿಕಾರಿಗಳು 13 ಕೋಟಿ ರೂ. ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಂಡಿದ್ದರು. ಅದಕ್ಕೂ ಮುನ್ನ ಅಕ್ಟೋಬರ್ 2022 ರಲ್ಲಿ, ಡಾರ್ಜಿಲಿಂಗ್ ಜಿಲ್ಲೆಯ ಅರಣ್ಯ ವ್ಯಾಪ್ತಿಯಿಂದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದೀಗ 12 ಕೋಟಿ ರೂಪಾಯಿ ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: 13 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್