ನವದೆಹಲಿ: 18ನೇ ಲೋಕಸಭೆಯ ಇಂದಿನ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಹುದ್ದೆಗೆ ಪೈಪೋಟಿ ನಡೆಯಲಿದ್ದು, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಸಂಸದ ಕೆ. ಸುರೇಶ್ ವಿರುದ್ಧ ಎನ್‌ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ ಕಣಕ್ಕಿಳಿದಿದ್ದಾರೆ.
ಲೋಕಸಭೆಯ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡುವಂತೆ ರಾಜನಾಥ್ ಸಿಂಗ್ ಅವರು ವಿರೋಧ ಪ್ರಕ್ಷಗಳಿಗೆ ಮನವಿ ಮಾಡಿದ್ದರು. ಈ ವೇಳೆ, ಉಪ ಸ್ಪೀಕರ್ ಹುದ್ದೆಗೆ ಪ್ರತಿಪಕ್ಷಗಳು ಬೇಡಿಕೆ ಇಟ್ಟಿದ್ದವು. ಇದಕ್ಕೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸ್ಪೀಕರ್ ಹುದ್ದೆಗೆ ಚುನಾವಣೆ ಏರ್ಪಟ್ಟಿದೆ. ಇದಕ್ಕೂ ಮೊದಲು ಚುನಾವಣೆಯ ಹಿಂದಿನ ಇತಿಹಾಸ ನೋಡುವುದಾದರೆ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ 1952, 1967 ಮತ್ತು 1976ರಲ್ಲಿ ಒಟ್ಟು 3 ಬಾರಿ ಮಾತ್ರ ಚುನಾವಣೆ ನಡೆದಿತ್ತು.
17ನೇ ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿರುವ ಓಂ ಬಿರ್ಲಾ ಅವರು ಒಬ್ಬ ಅನುಭವಿ ಸಂಸದೀಯ ಪಟು. ಇದುವರೆಗೆ ಅವರು ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿದ್ದಾರೆ. ಬಿರ್ಲಾ ಅವರ ಎದುರಾಳಿ ಕೆ.ಸುರೇಶ್ ಕೇರಳದ ಮಾವೇಲಿಕರ ಕ್ಷೇತ್ರದಿಂದ ಬಂದವರು. ಇವರು ಕೂಡ ಎಂಟು ಬಾರಿ ಸಂಸದರಾಗಿದ್ದಾರೆ.
ಚುನಾವಣೆ ಹಿನ್ನೆಲೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅಧಿವೇಶನದಲ್ಲಿ ತಮ್ಮ ಸದಸ್ಯರ ಉಪಸ್ಥಿತಿಯನ್ನು ಕಡ್ಡಾಯಗೊಳಿಸಿದ್ದಲ್ಲದೇ ಮೂರು ಸಾಲಿನ ವಿಪ್ ಜಾರಿಗೊಳಿಸಿವೆ. ಇದು ಇಂದಿನ ಚುನಾವಣೆಯ ತೀವ್ರತೆಯನ್ನು ಸೂಚಿಸುತ್ತಿದೆ. ಒಟ್ಟು 543 ಲೋಕಸಭೆ ಸೀಟುಗಳಲ್ಲಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳ ಬಲ ಹೊಂದಿದ್ದು, ಇಂಡಿಯಾ ಒಕ್ಕೂಟ 234 ಸ್ಥಾನಗಳನ್ನು ಹೊಂದಿದೆ.
ಇಂದು ಅಧಿಕೃತವಾಗಿ ಸ್ಪೀಕರ್ ಆಯ್ಕೆ ನಂತರ ಜೂನ್ 27 ರಂದು ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಜೂನ್ 24 ರಂದು ಆರಂಭಗೊಂಡಿರುವ ಅಧಿವೇಶನ ಜುಲೈ 3 ರಂದು ಮುಕ್ತಾಯಗೊಳ್ಳಲಿದೆ.