ತೆಂಕಶಿ(ತಮಿಳುನಾಡು): ವೃದ್ಧ ದಂಪತಿಯ ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ. ರೈಲ್ವೆ ಹಳಿ ಮೇಲೆ ಲಾರಿ ಪಲ್ಟಿ ಆಗಿರುವುದನ್ನು ಗಮನಿಸಿದ ದಂಪತಿ, ಟಾರ್ಚ್ ಲೈಟ್ ತೋರಿಸುವ ಮೂಲಕ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಪತಿಯ ಮಹತ್ಕಾರ್ಯದಿಂದ ಸಂಭವಿಸಬಹುದಾದ ಅವಘಡವೊಂದು ತಪ್ಪಿದೆ. ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.
ಲಾರಿ ಪಲ್ಟಿಯಾಗಿ ಚಾಲಕ ಸಾವು: ಕೇರಳದಿಂದ ತಮಿಳುನಾಡಿನ ತೂತುಕುಡಿಗೆ ಪ್ಲೈವುಡ್ ಲೋಡ್ ಹೊತ್ತ ಕಾರ್ಗೋ ಲಾರಿ ತಮಿಳುನಾಡು - ಕೇರಳ ಗಡಿಭಾಗದ ಎಸ್ ವೇಲವು ಪ್ರದೇಶದತ್ತ ಹೊರಟಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹಳಿಗಳ ಮೇಲೆ ಪಲ್ಟಿ ಹೊಡೆದು ಅಪಘಾತ ಸಂಭವಿಸಿತ್ತು.
ಇದೇ ಸಂದರ್ಭದಲ್ಲಿ ತಿರುನಲ್ವೇಲಿಯಿಂದ ಕೇರಳದ ಪಾಲಕ್ಕಾಡ್ ಕಡೆಗೆ ರೈಲು ಬರುತ್ತಿತ್ತು. ಆಗ ಇದನ್ನು ಪುಳಿಯರೈನ ಷಣ್ಮುಗಯ್ಯ ಹಾಗೂ ಪತ್ನಿ ಕುರುಂತಮ್ಮಾಳ್ ಎಂಬ ದಂಪತಿ ಗಮನಿಸಿದ್ದಾರೆ. ತಕ್ಷಣ ಅವಘಡದ ಸಾಧ್ಯತೆ ಅರಿತು, ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಲು ಮುಂದೆ ಓಡಿ ಬಂದಿದ್ದಾರೆ. ಬಳಿಕ ಟಾರ್ಚ್ ಲೈಟ್‌ನೊಂದಿಗೆ ರೈಲಿನತ್ತ ಸಿಗ್ನಲ್ ತೋರಿಸಿದ್ದಾರೆ. ಇದನ್ನು ಗ್ರಹಿಸಿದ ಲೋಕೊ ಪೈಲಟ್ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಪಲ್ಟಿಯಾಗಿದ್ದ ಲಾರಿ ಜಖಂಗೊಂಡಿದ್ದು, ಚಾಲಕ ಮುಕ್ಕುಡಲ್ನ ನಿವಾಸಿ ಮಣಿಕಂದನ್ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ, ಲಾರಿ ಕ್ಲೀನರ್ ಕೆಳಗಡೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದ ಪುಳಿಯರೈ ಠಾಣೆ ಹಾಗೂ ತೆಂಕಶಿ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಮೃತದೇಹವನ್ನು ಹೊರತೆಗೆದು ತೆಂಕಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಿಂದ ಸೆಂಗೊಟ್ಟೈನಿಂದ ಕೇರಳದ ಪಾಲಕ್ಕಾಡ್‌ಗೆ ಬರುತ್ತಿದ್ದ ರೈಲು ಮತ್ತು ಚೆನ್ನೈನಿಂದ ಕೊಲ್ಲಂಗೆ ಹೋಗುತ್ತಿದ್ದ ರೈಲುಗಳ ಸಂಚಾರವನ್ನು ಕೆಲ ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಬಳಿಕ, ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಹಳಿ ದುರಸ್ತಿ ಮಾಡಿದ್ದಾರೆ. ಅಪಘಾತದ ಸ್ಥಳದಲ್ಲಿ ಬಿದ್ದಿದ್ದ ಲಾರಿಯನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ: ಲೋಕೋ ಪೈಲಟ್ ಇಲ್ಲದೆ 78 ಕಿ.ಮೀ. ಚಲಿಸಿದ ರೈಲು: ಗೂಡ್ಸ್ ಟ್ರೈನ್ ನಿಲ್ಲಿಸಲು ಸಿಬ್ಬಂದಿ ಹರಸಾಹಸ