ಬೇಸಿಗೆ ಆರಂಭ ಆಗುತ್ತಿದ್ದಂತೆ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣಿನ ಆಗಮನವೂ ಆಗುತ್ತದೆ. ದೇಹಕ್ಕೆ ತಂಪೆರೆಯುವ ಕಲ್ಲಂಗಡಿಗೆ ಈ ಋತುಮಾನದಲ್ಲಿ ಭಾರೀ ಬೇಡಿಕೆ. ಈ ಬಾರಿ ಕಲ್ಲಂಗಡಿಪ್ರಿಯರಲ್ಲಿ ಹೊಸ ತಳಿಯ ಕಲ್ಲಂಗಡಿ ಅಚ್ಚರಿ ಉಂಟುಮಾಡಲಿದೆ. ಉತ್ತರ ಪ್ರದೇಶ ಮಾರುಕಟ್ಟೆಯಲ್ಲಿ ಸರಸ್ವತಿ ಎಂಬ ತಳಿ ಗಮನ ಸೆಳೆಯುತ್ತಿದೆ.
ಚೌಕಾಕಾರದ ಕಲ್ಲಂಗಡಿ ಗಾತ್ರದಲ್ಲಿ ಚಿಕ್ಕದು. ಈ ಹಣ್ಣು ಬೆಳೆಯಲು ಹೈಬ್ರಿಡ್ ಬೀಜಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಯಾಗ್ರಾಜ್ನಲ್ಲಿ ಬೆಳೆಯಲಾಗುತ್ತಿರುವ ಸರಸ್ವತಿ ತಳಿಯ ಕಲ್ಲಂಗಡಿ ಹಣ್ಣು ಅತೀ ಹೆಚ್ಚು ಸಕ್ಕರೆಯ ಅಂಶ ಹೊಂದಿದೆ. ಪ್ರಯಾಗ್ರಾಜ್, ಕೌಶಾಂಬಿ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಮಲ್ಚ್ ಫಿಲ್ಮ್ ಕೃಷಿ ತಂತ್ರದಿಂದ 1,000 ಎಕರೆ ಭೂಮಿಯಲ್ಲಿ ಇದನ್ನು ಬೆಳೆಯಲಾಗುತ್ತಿದೆ.
ಸಾಮಾನ್ಯವಾಗಿ ಕಲ್ಲಂಗಡಿ ಎಂದರೆ ಹೊರಗೆ ಹಸಿರು, ಒಳಗೆ ಕೆಂಪು ಬಣ್ಣವಿರುತ್ತದೆ. ಆದರೆ, ಈ ಚೌಕಾಕಾರದ ಹೈಬ್ರಿಡ್ ಕಲ್ಲಂಗಡಿ ಹೊರಗೆ ಹಳದಿ ಹಾಗೂ ಒಳಗೆ ಹಸಿರು ಮತ್ತು ಹಳದಿ ಬಣ್ಣ ಹೊಂದಿದೆ.
ಈ ಕುರಿತು ಮಾತನಾಡಿರುವ ಕೃಷಿ ತಜ್ಞ ಮನೋಜ್ ಕುಮಾರ್ ಶ್ರೀವಾಸ್ತವ, "ತೈವಾನ್ನಿಂದ ತಂದ ಬೀಜಗಳಿಂದ ಈ ಹೈಬ್ರಿಡ್ ಹಣ್ಣು ಬೆಳೆಯಲಾಗುತ್ತಿದೆ. ಇದು ಸಾಮಾನ್ಯ ಕಲ್ಲಂಗಡಿಗೆ ಹೋಲಿಕೆ ಮಾಡಿದಾಗ ಸಣ್ಣ ಮತ್ತು ಮಧ್ಯಮ ಗಾತ್ರದ್ದು. ಸಾಮಾನ್ಯ ಜನಪ್ರಿಯ ಕಲ್ಲಂಗಡಿ ಹಣ್ಣು ವೃತ್ತಾಕಾರದಲ್ಲಿದ್ದು, ಇದರಲ್ಲಿ ಒಟ್ಟಾರೆ ಘನ ಸಕ್ಕರೆ ಅಂಶ ಶೇ 14ರಿಂದ 15ರಷ್ಟಿರುತ್ತದೆ. ರೈತರು ತಾಂತ್ರಿಕ ಮಾರ್ಗದರ್ಶನದೊಂದಿಗೆ ಹೊಸ ತಳಿಯ ಕಲ್ಲಂಗಡಿ ಬೆಳೆದಿದ್ದಾರೆ. ಹೈಬ್ರಿಡ್ ಕಲ್ಲಂಗಡಿ ರೈತರಿಗೆ ಉತ್ತಮ ಲಾಭ ನೀಡುತ್ತಿವೆ" ಎಂದರು.
"ರೈತರು ಎಕರೆಗೆ 80 ಸಾವಿರದಿಂದ 90 ಸಾವಿರ ರೂ.ವರೆಗೆ ಲಾಭ ಪಡೆಯಬಹುದು. ಪ್ರಸ್ತುತ ಕಲ್ಲಂಗಡಿ ಹೈಬ್ರಿಡ್ ಬೆಳೆಯನ್ನು ಟ್ರಾನ್ಸ್-ಗಂಗಾ ಮತ್ತು ಯಮುನಾ (ಪ್ರಯಾಗ್ರಾಜ್), ಕೌಶಂಬಿಯ ಮೂರತ್ಗಂಜ್ ಮತ್ತು ಫತೇಪುರ್ ಜಿಲ್ಲೆಯ ಖಗಾದಲ್ಲಿ ಬೆಳೆಸಲಾಗುತ್ತಿದೆ. ಸರಸ್ವತಿ ತಳಿಯ ಕಲ್ಲಂಗಡಿ ಶೀಘ್ರದಲ್ಲೇ ಬೇರೆ ರಾಜ್ಯಗಳಿಗೂ ರಫ್ತಾಗಲಿದೆ" ಎಂದು ಮಾಹಿತಿ ನೀಡಿದರು.(ಐಎಎನ್ಎಸ್)
ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ: ಎಲ್ಲಿ, ಯಾವಾಗ ಗೋಚರ- ವೀಕ್ಷಿಸುವುದು ಹೇಗೆ?