ನವದೆಹಲಿ: ಮುಸ್ಲಿಮೇತರ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರುದ್ಧ ಸುಪ್ರೀಂಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನೂ ಏಕಕಾಲಕ್ಕೆ ಏಪ್ರಿಲ್ 9 ರಂದು ವಿಚಾರಣೆ ನಡೆಸಲು ಕೋರ್ಟ್ ದಿನಾಂಕ ನಿಗದಿಪಡಿಸಿದ್ದು, ಇದಕ್ಕೂ ಮೊದಲು ರೂಪಿಸಲಾದ ನಿಯಮಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರಕ್ಕೆ 3 ವಾರಗಳ ಗಡುವು ನೀಡಿದೆ.
ಮಾರ್ಚ್ 11 ರಂದು ಜಾರಿಯಾದ ಸಿಎಎ ನಿಯಮಗಳಿಗೆ ತಡೆ ನೀಡಬೇಕು ಎಂದು ಕೋರಿ 237 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ಕೋರ್ಟ್ ಮಂಗಳವಾರ ಒಪ್ಪಿಕೊಂಡಿತು. ಅಲ್ಲದೇ, ಏಪ್ರಿಲ್ 9 ನೇ ತಾರೀಖಿನಂದು ವಿಚಾರಣೆಗೆ ಮುಹೂರ್ತ ನಿಗದಿಪಡಿಸಿತು. ಸಿಎಎ ತಡೆ ಕೋರಿ ಬಂದಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಿಎಎ ನಿಯಮಗಳ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕಾಯ್ದೆಯ ನಿಯಮಗ ಜಾರಿ ತಡೆಯಿರಿ: ಇಂದು ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಪೌರತ್ವ ನೀಡುವ ಸಿಎಎ ನಿಯಮಗಳಿಗೆ ತಡೆಯಾಜ್ಞೆ ನೀಡುವಂತೆ ಬಲವಾಗಿ ವಾದಿಸಿದರು. ಸರ್ಕಾರ ಜಾರಿಗೆ ತಂದಿರುವ ನಾಗರಿಕತ್ವ (ತಿದ್ದುಪಡಿ) ಕಾಯಿದೆಯ ನಿಯಮಗಳ ಅನುಸಾರ ಪೌರತ್ವ ಪಡೆದ ವ್ಯಕ್ತಿಗಳು ಮತದಾನ ಮಾಡಲು ಅರ್ಹರೇ?. ಈ ಕಾಯ್ದೆ ಜಾರಿ ತಡೆಯಬೇಕು ಎಂದು ಅವರು ಕೋರಿದರು.
ಜಾರಿಯಾದ ನಿಯಮಗಳು ಕೋರ್ಟ್ನ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತವೆ ಎಂದು ಸರ್ಕಾರಕ್ಕೆ ಸೂಚಿಸಬೇಕಾಗಿ ಜೈಸಿಂಗ್ ಕೋರಿದರು. ಇದಕ್ಕೆ ಕೋರ್ಟ್, ಪೌರತ್ವ ನೀಡುವ ನಿಯಮಗಳು ಜಾರಿಯಾಗಿವೆ. ಇನ್ನು ಅದರ ಪ್ರಕ್ರಿಯೆಗಳು ಆರಂಭವಾಗಿಲ್ಲ ಎಂದು ಹೇಳಿತು. ಅರ್ಜಿದಾರರ ಪರ ವಾದಿಸಿದ ಇನ್ನೊಬ್ಬ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಯಾವುದೇ ಪೌರತ್ವ ನಿಯಮಗಳು ಜಾರಿಯಾಗಬಾರದು. ಕಾರಣ, ಒಮ್ಮೆ ಪೌರತ್ವ ನೀಡಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದರು.
ವಕೀಲ ನಿಜಾಮ್ ಪಾಷಾ ವಾದಿಸಿ, ಸಿಎಎ ಮತ್ತು ಎನ್‌ಆರ್‌ಸಿ ಪರಸ್ಪರ ಸಂಬಂಧ ಹೊಂದಿವೆ. ಹೀಗಾಗಿ ಯಾವ ಕಾಯ್ದೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದರು. ಇದಕ್ಕೆ ಸರ್ಕಾರದ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತೀವ್ರ ವಿರೋಧಿ ವ್ಯಕ್ತಪಡಿಸಿದರು. ಸಿಎಎ ಮಾತ್ರ ನ್ಯಾಯಾಲಯದ ಮುಂದಿದೆ. ಎನ್‌ಆರ್‌ಸಿ ಅಲ್ಲ ಎಂದರು.
ಏನಿದು ಸಿಎಎ ಕಾಯ್ದೆ: ಹೊಸದಾಗಿ ಜಾರಿಗೊಳಿಸಲಾದ ನಿಯಮಗಳ ಅಡಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೀಡಾಗಿ ಭಾರತಕ್ಕೆ ಬಂದು ನೆಲೆಸಿರುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ನಾಗರಿಕತ್ವವನ್ನು ಇದು ನೀಡುತ್ತದೆ.
ಇದನ್ನೂ ಓದಿ; ಸಿಎಎ ಜಾರಿಯಾದ ಮರುದಿನವೇ ತಡೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ ಮುಸ್ಲಿಂ ಲೀಗ್