ತಿರುವನಂತಪುರಂ (ಕೇರಳ) : ಶಬರಿಮಲೆ ಯಾತ್ರೆಗೆ ದಿನಗಣನೆ ಶುರುವಾಗಿದೆ. ಭಕ್ತರು 18 ಮೆಟ್ಟಿಲುಗಳ ಒಡೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಕೇರಳ ಸರ್ಕಾರ ಸ್ಪಾಟ್ ಬುಕ್ಕಿಂಗ್ ರದ್ದು ಮಾಡಿದ್ದು, ಇದು ಅಯ್ಯಪ್ಪನ ಭಕ್ತರಿಗೆ ತೊಡಕುಂಟು ಮಾಡುವ ಸಾಧ್ಯತೆ ಇದೆ. ದರ್ಶನಕ್ಕೆ ಪೂರ್ವನಿಗದಿಯಾಗಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ವಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಯುಡಿಎಫ್ ಸೇರಿದಂತೆ ಇತರ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಎಲ್ಲ ಭಕ್ತರಿಗೆ ಆನ್ಲೈನ್ ಜ್ಞಾನ ಇರುವುದಿಲ್ಲ. ಹೀಗಾಗಿ ಸ್ಪಾಟ್ ಬುಕ್ಕಿಂಗ್ (ಸ್ಥಳದಲ್ಲೇ ಟಿಕೆಟ್ ವ್ಯವಸ್ಥೆ) ಅನ್ನು ಮುಂದುವರಿಸಬೇಕು ಎಂದು ಆಗ್ರಹಿಸಿವೆ. ಆದರೆ, ವಿಪಕ್ಷಗಳ ಈ ಒತ್ತಾಯವನ್ನು ಸರ್ಕಾರ ನಿರಾಕರಿಸಿದೆ. ಆದರೆ, ಎಲ್ಲರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದಿದೆ.
ಎಲ್ಲ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ: ಸ್ಪಾಟ್ ಬುಕ್ಕಿಂಗ್ ರದ್ದು ಮಾಡಿದ್ದರಿಂದ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳದ ಭಕ್ತರಿಗೆ ದರ್ಶನ ಅವಕಾಶ ಸಿಗದೇ ಹೋದಲ್ಲಿ ಹೋರಾಟ, ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದೇವಸ್ವಂ ಸಚಿವ ವಿ.ಎನ್ ವಾಸವನ್, ವಾರ್ಷಿಕ ಮಂಡಲಂ ಮಕರವಿಳಕ್ಕು ಯಾತ್ರೆ ವೇಳೆ ಅಯ್ಯಪ್ಪ ದೇವಸ್ಥಾನಕ್ಕೆ ಬರುವ ಯಾವುದೇ ಭಕ್ತರು ದರ್ಶನವಿಲ್ಲದೇ ವಾಪಸ್ ತೆರಳುವುದಿಲ್ಲ. ಎಲ್ಲರಿಗೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವರ್ಚುವಲ್ ಕ್ಯೂ ವ್ಯವಸ್ಥೆ ಮಾಡಲಾಗಿದ್ದು, ಶಬರಿಮಲೆ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಮೂಲಕ ಯಾತ್ರಾರ್ಥಿಗಳು ತಮ್ಮ ದರ್ಶನ ಮತ್ತು ಪ್ರಸಾದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರಗಳಲ್ಲಿ ಸ್ಲಾಟ್ ಬುಕಿಂಗ್: ಆನ್‌ಲೈನ್‌ನಲ್ಲಿ ಈ ಮೊದಲೇ ಬುಕ್ಕಿಂಗ್ ಮಾಡಿಕೊಳ್ಳದ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಬದಲಾಗಿ, ದೇವಸ್ವಂ ಮಂಡಳಿಯು ಗುರುತಿಸಿದ ಕೇಂದ್ರಗಳಲ್ಲಿ ಟಿಕೆಟ್ ನೀಡಲಾಗುತ್ತದೆ. ಅಲ್ಲಿ ಜನರು ತಮ್ಮ ದರ್ಶನ ಮತ್ತು ಪ್ರಸಾದ ಟಿಕೆಟ್ ಕಾಯ್ದಿರಿಸಬಹುದು. ದಿನಕ್ಕೆ 80 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ, ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕಾಗಿ ದಿನಗಟ್ಟಲೆ ನಿಲ್ಲಬೇಕಾಗಿ ಬಂದಿತ್ತು. ಇದರಿಂದ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಮೌಲಸೌಕರ್ಯಗಳ ಕೊರತೆಯೂ ಉಂಟಾಗಿ ಭಕ್ತರು ತೀವ್ರ ಸಂಕಷ್ಟ ಎದುರಿಸಿದ್ದರು. ಈ ಬಾರಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಲು ಮುಂದಾಗಿದೆ.
ನವೆಂಬರ್ 16 ರಿಂದ ಡಿಸೆಂಬರ್ 27 ರ ತನಕ ಮಂಡಲ ಪೂಜೆ ಜರುಗಲಿದೆ.