ನವದೆಹಲಿ: ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ದ್ವಿಮುಖ ನೀತಿಯನ್ನು ಹೊಂದಿರಬಾರದು. ಅದರ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕಿಸ್ತಾನದ ಕುಟಿಲತೆ ವಿರುದ್ಧ ವಾಗ್ದಾಳಿ ನಡೆಸಿದರು.
16ನೇ ಬ್ರಿಕ್ಸ್ ಶೃಂಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದೆಡೆ ಭಯೋತ್ಪಾದನೆ ವಿರುದ್ಧ ಹೋರಾಟ, ಇನ್ನೊಂದೆಡೆ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದು ಸರಿಯಲ್ಲ. ಇಂತಹ ದ್ವಿಮುಖ ನೀತಿಯು ಅಪಾಯಕಾರಿ ಎಂದು ಹೇಳಿದರು.
My remarks during the BRICS Summit in Kazan, Russia. https://t.co/TvPNL0HHd0
— Narendra Modi (@narendramodi) October 23, 2024
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಏಕಮನಸ್ಸಿನ, ದೃಢ ಬೆಂಬಲವಿರಬೇಕು. ಇಂತಹ ಗಂಭೀರ ವಿಷಯದಲ್ಲಿ ದ್ವಂದ್ವ ನಿಲುವು ಇರಬಾರದು ಎಂದು ಪಾಕಿಸ್ತಾನವನ್ನು ಟೀಕಿಸಿದರು.
ಹೊಸ ಸವಾಲು ಎದುರಿಸಬೇಕು: ರಾಷ್ಟ್ರಗಳ ನಡುವೆ ಸಂಘರ್ಷ, ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಭಯೋತ್ಪಾದನೆ, ಪ್ರಪಂಚವು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ವಿಭಜನೆಯಂತಹ ಹಲವಾರು ಸವಾಲುಗಳ ನಡುವೆ ಬ್ರಿಕ್ಸ್ ಶೃಂಗ ನಡೆದಿದ್ದು ಗಮನಾರ್ಹ ಎಂದು ಪ್ರಧಾನಿ ಮೋದಿ ಹೇಳಿದರು.
ಹಣದುಬ್ಬರ ತಡೆ, ಆಹಾರ, ಇಂಧನ, ಆರೋಗ್ಯ, ನೀರಿನ ಭದ್ರತೆ ವಿಶ್ವದ ಎಲ್ಲಾ ದೇಶಗಳಿಗೆ ಆದ್ಯತೆಯ ವಿಷಯವಾಗಿದೆ. ಇದರ ಜೊತೆಗೆ ತಂತ್ರಜ್ಞಾನದ ಈ ಯುಗದಲ್ಲಿ, ಡೀಪ್‌ಫೇಕ್, ಸುಳ್ಳು ಮಾಹಿತಿಯಂತಹ ಹೊಸ ಸವಾಲುಗಳು ಹುಟ್ಟಿಕೊಂಡಿವೆ. ಇದನ್ನು ಮೆಟ್ಟಿನಿಲ್ಲಬೇಕಿದೆ ಎಂದರು.
ಬ್ರಿಕ್ಸ್ ಶೃಂಗವು ವೈವಿಧ್ಯಮಯ ಮತ್ತು ಅಂತರ್ಗತ ವೇದಿಕೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ. ನಮ್ಮ ಕಾರ್ಯವಿಧಾನವು ಜನಕೇಂದ್ರಿತವಾಗಿರಬೇಕು. ಇದು ವಿಭಜಕ ಸಂಘಟನೆಯಲ್ಲ, ಅದು ಮಾನವ ಹಿತಾಸಕ್ತಿಯ ಮೇಲೆ ಕೆಲಸ ಮಾಡುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಬೇಕು ಎಂದು ಪ್ರಧಾನಿ ಕರೆ ನೀಡಿದರು.
ಯಾರ ಮಧ್ಯೆಯೂ ಸಂಘರ್ಷ ಬೇಡ: ಇದೇ ವೇಳೆ, ಕೆಲ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಸಂಘರ್ಷಗಳನ್ನು ಪ್ರಸ್ತಾಪಿಸಿದ ಮೋದಿ ಅವರು, ಕೋವಿಡ್ ಸಾಂಕ್ರಾಮಿಕವನ್ನು ಒಟ್ಟಾಗಿ ಮೆಟ್ಟಿದಂತೆ, ವಿಶ್ವವೇ ಒಂದಾಗಿ ಎಲ್ಲ ಸಂಘರ್ಷಗಳಿಗೆ ಅಂತ್ಯ ಹಾಡಬೇಕಿದೆ. ಇದು ಯುದ್ಧದ ಕಾಲವಲ್ಲ. ಮುಂದಿನ ಪೀಳಿಗೆಗೆ ಸುರಕ್ಷಿತ, ಬಲವಾದ ಮತ್ತು ಸಮೃದ್ಧ ಭವಿಷ್ಯವನ್ನು ಸೃಷ್ಟಿಸಿ ಕೊಡಬೇಕಿದೆ ಎಂದು ಪುನರುಚ್ಚರಿಸಿದರು.
ಬ್ರಿಕ್ಸ್ ಶೃಂಗವು ಮತ್ತಷ್ಟು ವಿಸ್ತರಣೆಯಾಗಬೇಕು. ಹೊಸ ದೇಶಗಳನ್ನು ಬ್ರಿಕ್ಸ್‌ಗೆ ಪಾಲುದಾರ ರಾಷ್ಟ್ರಗಳಾಗಿ ಸೇರಲು ಭಾರತ ಸ್ವಾಗತಿಸುತ್ತದೆ ಎಂದರು.
ಇದನ್ನೂ ಓದಿ; ರಷ್ಯಾದಲ್ಲಿ 16ನೇ ಬ್ರಿಕ್ಸ್ ಶೃಂಗಸಭೆ: ಇರಾನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ