ನವದೆಹಲಿ: ಬೇರೆ ದೇಶಗಳಿಂದ ಭಾರತಕ್ಕೆ ಬಂದ ವಲಸಿಗರಿಗೆ ನಾಗರಿಕತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿ ಮಾಡಲು ಯಾವುದೇ ಸಮಯ ನಿಗದಿಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟನೆ ನೀಡಿದೆ. ಕೇಂದ್ರ ಸಚಿವ ಶಂತನು ಠಾಕೂರ್ ಅವರು ವಾರದೊಳಗೆ ದೇಶಾದ್ಯಂತ ಸಿಎಎ ಜಾರಿಗೆ ತರಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಗೃಹ ಸಚಿವಾಲಯ ಈ ಹೇಳಿಕೆ ನೀಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ಯಾವಾಗ ಬೇಕಾದರೂ ಸಿಎಎ ಜಾರಿಯಾಗಬಹುದು. ಅದರ ಅನುಷ್ಠಾನಕ್ಕೆ ನಿಖರವಾದ ಕಾಲಾವಧಿ ನಿಗದಿ ಮಾಡಿಲ್ಲ. ಕಾಯ್ದೆಯ ಜಾರಿಗೆ ನಿಯಮಗಳನ್ನು ರೂಪಿಸಲು ಲೋಕಸಭೆಯ ಶಾಸನಗಳ ಸಂಸದೀಯ ಸಮಿತಿಯು ಗೃಹ ಸಚಿವಾಲಯಕ್ಕೆ ನೀಡಿದ್ದ ಅವಧಿ ವಿಸ್ತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಿಎಎ ನಿಯಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಕಾಯ್ದೆ ಅನುಷ್ಠಾನಕ್ಕೆ ತರುವ ಅವಧಿಯನ್ನು ವಿಸ್ತರಿಸುವ ಅಗತ್ಯವಿತ್ತು. ಜನವರಿ 9 ಕ್ಕೆ ನೀಡಿದ್ದ ಗಡುವು ಮುಗಿದಿದೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ, ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 2019 ರಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳು ಅಂತಿಮವಾಗಿದೆ. 2024ರ ಲೋಕಸಭೆ ಚುನಾವಣೆಯ ಘೋಷಣೆಯ ಮೊದಲು ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಹೇಳಿದ್ದರು.
ಸಿಎಎ ನಿಯಮಗಳನ್ನು ಅಂತಿಮಗೊಳಿಸಿ, ಆನ್‌ಲೈನ್ ಪೋರ್ಟಲ್ನಲ್ಲಿ ಹರಿಬಿಡಲಾಗಿದೆ. ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್ ಆಗಿರುತ್ತದೆ. ಬೇರೆ ದೇಶಗಳಿಂದ ಅನುಮತಿ ರಹಿತವಾಗಿ ಬಂದ ವಲಸಿಗರು, ತಾವು ಬಂದ ವರ್ಷ ಯಾವಾಗ ಎಂಬುದನ್ನು ತಿಳಿಸಬೇಕಾಗುತ್ತದೆ. ಅಂತಹವರು ಈ ದೇಶದ ಪೌರತ್ವ ಬಯಸಿ ಅರ್ಜಿ ಹಾಕಿದಲ್ಲಿ ಅವರಿಂದ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಸಿಎಎ: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014 ರೊಳಗೆ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ನಾಗರಿಕತ್ವ ನೀಡುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಡಿಸೆಂಬರ್ 11 ರಂದು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು. ಅದೇ ವರ್ಷ ಡಿಸೆಂಬರ್ 12 ರಂದು ರಾಷ್ಟ್ರಪತಿಗಳಿಂದ ಒಪ್ಪಿಗೆಯನ್ನೂ ಪಡೆಯಲಾಯಿತು. ಈ ಕಾಯಿದೆಯು 2020ರ ಜನವರಿ 10 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯ ಘೋಷಿಸಿತ್ತು. ಆದರೆ, ಕಾಯ್ದೆಯ ಕೆಲ ನಿಯಮಗಳ ತಿದ್ದುಪಡಿ ಕಾರಣ, ಅನುಷ್ಠಾನ ವಿಳಂಬವಾಗಿದೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ.
ಕೇಂದ್ರ ಸಚಿವರ ಹೇಳಿಕೆ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶಂತನು ಠಾಕೂರ್ ಅವರು, ಮುಂದಿನ ಏಳು ದಿನಗಳಲ್ಲಿ ಭಾರತದಾದ್ಯಂತ ಸಿಎಎ ಜಾರಿಗೊಳಿಸಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ಹೇಳಿದ್ದಾರೆ. ಇದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ: ಮಮತಾ