ನವದೆಹಲಿ: ವಿಪಕ್ಷಗಳ I.N.D.I.A ಮಹಾಮೈತ್ರಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮರಳಿ ಎನ್ಡಿಎ ಸೇರುವ ಬಗ್ಗೆ ಗುಸುಗುಸು ಶುರುವಾಗಿದೆ. ಅಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಇಂಥದ್ದೊಂದು ವದಂತಿಗೆ ಇಂಬು ನೀಡಿದೆ.
ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ಆರ್ಜೆಡಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ಕುಮಾರ್ ಈಗ ಆ ಮೈತ್ರಿಗೂ ತಿಲಾಂಜಲಿ ಹೇಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಇಂಬು ನೀಡುವಂತೆ ಸಿಎಂ ಈಚೆಗೆ ರಾಜ್ಯಪಾಲರನ್ನು ಏಕಾಂಗಿಯಾಗಿ ಭೇಟಿ ಮಾಡಿದ್ದರು. ಇಂದು ನಡೆದ ಸಚಿವ ಸಂಪುಟವು ಕೇವಲ 15 ನಿಮಿಷದಲ್ಲಿ ಮುಗಿದಿದೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಡೆಗೆ ಸಿಎಂ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸಂಪುಟದಲ್ಲೂ ಇಬ್ಬರ ಮಧ್ಯೆ ವಾಗ್ವಾದ ನಡೆಯುವ ಸಾಧ್ಯತೆ ಇತ್ತು ಎಂದು ವರದಿಯಾಗಿದೆ.
ಮೋದಿ ಹೊಗಳಿದ ನಿತೀಶ್: ಇನ್ನೂ, ನಿತೀಶ್ಕುಮಾರ್ ಅವರು ಮತ್ತೆ ಬಿಜೆಪಿಗೆ ಮರಳುವ ಸಾಧ್ಯತೆಯಿದೆ ಎಂಬ ಮಾತಿಗೆ ಇಂಬು ನೀಡುವಂತೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದು ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಬಿಹಾರ ಸಿಎಂ ಸಾರ್ವಜನಿಕವಾಗಿ ಹೊಗಳಿದ್ದರು. ಜೊತೆಗೆ ಕರ್ಪೂರಿ ಠಾಕೂರ್ ಅವರು ತಮ್ಮ ಕುಟುಂಬವನ್ನು ರಾಜಕೀಯದಲ್ಲಿ ತೊಡಗಿಸಲಿಲ್ಲ ಎಂದು ಹೇಳುವ ಮೂಲಕ ಆರ್ಜೆಡಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಈ ಹೇಳಿಕೆ ಬಿಜೆಪಿಗೆ ಸೇರುವ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಪ್ರಧಾನಿ, ನಡ್ಡಾ ಸಭೆ: ಬಿಹಾರದ ರಾಜಕೀಯ ಪರಿಸ್ಥಿತಿ ಕುರಿತು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. ಆದಾಗ್ಯೂ, ನಿತೀಶ್ ಕುಮಾರ್ ಅವರ ವಾಪಸಾತಿಯ ಬಗ್ಗೆ ಖಚಿತ ಮಾಹಿತಿ ನೀಡಿಲ್ಲವಾದರೂ, ಇದನ್ನು ನಿರಾಕರಿಸಲಿಲ್ಲ. ಹಾಗೊಂದು ವೇಳೆ ನಿತೀಶ್ಕುಮಾರ್ ಅವರು ಎನ್ಡಿಎ ಕೂಟಕ್ಕೆ ಮರಳಿದಲ್ಲಿ 2013 ರಿಂದ ಇದು ಅವರ ಐದನೇ ಜಂಪಿಂಗ್ ಆಗಿದೆ. 2022 ರಲ್ಲಿ ಜೆಡಿಯು ಬಿಜೆಪಿ ಮೈತ್ರಿಕೂಟವನ್ನು ಮುರಿದು ಆರ್ಜೆಡಿ ಜೊತೆಗೆ ಸರ್ಕಾರ ರಚಿಸಿದ್ದರು.
ಇಂಡಿಯಾ ಕೂಟದಲ್ಲಿ ನಡುಕ: ಇಂಡಿಯಾ ಕೂಟದಲ್ಲಿ ವಿಪಕ್ಷಗಳು ಈಗಾಗಲೇ ಸೀಟು ಹಂಚಿಕೆಯ ವಿಚಾರವಾಗಿ ಕಿತ್ತಾಡಿಕೊಳ್ಳುತ್ತಿವೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕಾಂಗ್ರೆಸ್ ಜೊತೆ ತಮ್ಮ ರಾಜ್ಯದಲ್ಲಿ ಹೊಂದಾಣಿಕೆ ಇಲ್ಲ ಎಂದು ಘೋಷಿಸಿದ್ದಾರೆ. ಎರಡೂ ಪ್ರಮುಖ ಪಕ್ಷಗಳ ಈ ಘೋಷಣೆ ಕೂಟದಲ್ಲಿ ದೊಡ್ಡ ಬಿರುಕು ಮೂಡಿಸಿತ್ತು. ಇದೀಗ ಬಿಹಾರದಲ್ಲಿ ನಿತೀಶ್ಕುಮಾರ್ ಅವರ ನಡೆಗಳು ಕೂಡ ಮೈತ್ರಿಯಲ್ಲಿ ಸಣ್ಣಗೆ ನಡುಕ ಹುಟ್ಟಿಸಿವೆ.
ಇತ್ತೀಚಿಗೆ ನಡೆದ ಇಂಡಿಯಾ ಕೂಟದ ಸಭೆಯಲ್ಲಿ ನಿತೀಶ್ಕುಮಾರ್ ಅವರು ಹುದ್ದೆಯ ವಿಚಾರದಲ್ಲಿ ಮುನಿಸಿಕೊಂಡಿದ್ದರು. ಸಂಚಾಲಕ ಹುದ್ದೆಯನ್ನು ನಿರಾಕರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮುಖ್ಯಸ್ಥನ ಸ್ಥಾನ ನೀಡಿದ್ದರ ಬಗ್ಗೆಯೂ ಅವರು ಅಸಮಾಧಾನ ಹೊಂದಿದ್ದಾಗಿ ವರದಿಯಾಗಿತ್ತು.
ಇದನ್ನೂ ಓದಿ: ಕೇವಲ 15 ನಿಮಿಷದಲ್ಲಿ ಮುಗಿದ ಬಿಹಾರ ಸಚಿವ ಸಂಪುಟ ಸಭೆ: ಜೆಡಿಯು - ಆರ್ಜೆಡಿ ನಡುವೆ ಶೀತಲ ಸಮರ?