ಪಾಟ್ನಾ: ಬಿಹಾರದ ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ ನಡುವೆ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಇದರ ಪರಿಣಾಮ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಮೇಲೆ ಪರಿಣಾಮ ಬೀರಿದೆ. ಸಂಪುಟ ಸಭೆ ಆರಂಭವಾದ ಕೇವಲ 15 ನಿಮಿಷಗಳಲ್ಲಿ ಸಭೆ ಮುಕ್ತಾಯವಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಡೆಪ್ಯೂಟಿ ಸಿಎಂ ತೇಜಸ್ವಿ ಯಾದವ್ ನಡುವೆ ಶೀತಲ ಸಮರ ನಡೆಯುವಂತೆ ಕಂಡು ಬಂತು ಎಂದು ವರದಿಯಾಗಿದೆ.
ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಸಚಿವರ ನಡುವೆ ವಾಗ್ವಾದ ಉಂಟಾಗಿದೆ. ಅಷ್ಟೇ ಅಲ್ಲ ಅವರ್ಯಾರು ಪರಸ್ಪರ ಸಂವಹನವನ್ನೇ ನಡೆಸಲಿಲ್ಲ ಎಂದು ಹೇಳಲಾಗುತ್ತಿದೆ. ಸಂಪುಟ ಸಭೆ ಸಿಎಂ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಸೇರಿದಂತೆ ಆರ್ಜೆಡಿಯ ಯಾವುದೇ ಸಚಿವರ ಜತೆ ಸಂವಹನವನ್ನೇ ನಡೆಸಲಿಲ್ಲ ಎಂದು ತಿಳಿದು ಬಂತು. ಸಚಿವ ಸಂಪುಟ ಸಭೆಯಲ್ಲಿ ಸಹಜವಾಗಿ ಸರ್ಕಾರದ ಮುಂದಿನ ನಡೆ, ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ಚರ್ಚೆಗಳು ನಡೆಯುವುದು ಕಾಮನ್. ಆದರೆ ಇಂದು ಸಭೆಯಲ್ಲಿ ಇಂತಹ ಯಾವುದೇ ವಾತಾವರಣ ಕಂಡು ಬರಲಿಲ್ಲ.
ಬದಲಾಗಿ ಅಧಿಕಾರಿಗಳು ಸಲ್ಲಿಸಿದ ಮೂರು ಪ್ರಸ್ತಾವನೆಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ನಿತೀಶ್ ಕುಮಾರ್ ರಿಜಿಸ್ಟರ್‌ಗೆ ಸಹಿ ಮಾಡಿ ಸಭಾಂಗಣದಿಂದ ಹೊರಬಂದರು. ಇದು ಸಿಎಂ ನಿತೀಶ್ ಕುಮಾರ್ ಸ್ಪಷ್ಟವಾಗಿ ಅಸಮಾಧಾನಗೊಂಡಿರುವ ಬಗ್ಗೆ ತೋರಿಸಿದೆ. ಅಷ್ಟೇ ಅಲ್ಲ ಮೈತ್ರಿ ಬಗ್ಗೆ ಯಾವಾಗ ಬೇಕಾದರೂ ದೊಡ್ಡ ನಿರ್ಧಾರವನ್ನು ಸಿಎಂ ತೆಗೆದುಕೊಳ್ಳಬಹುದು ಎಂಬ ಮಾತುಗಳು ಮೂಲಗಳಿಂದ ಕೇಳಿ ಬಂದಿವೆ.
ಜನವರಿ 29 ರಂದು ಬಿಹಾರದ ಕಿಶನ್‌ಗಂಜ್ ಜಿಲ್ಲೆಗೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರವೇಶಿಸಲಿದೆ. ಈ ವೇಳೆ ಜೆಡಿಯು ಮತ್ತು ಆರ್‌ಜೆಡಿ ನಡುವಣ ಶೀತಲ ಸಮರ ಬಹಿರಂಗವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷ ನೀಡಿದ ಆಹ್ವಾನದ ಹೊರತಾಗಿಯೂ ನಿತೀಶ್ ಕುಮಾರ್ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಂಗಳವಾರ ಸಿಎಂ ನಿತೀಶ್ ಕುಮಾರ್ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದರು. ರಾಜಧಾನಿ ಪಾಟ್ನಾದಲ್ಲಿರುವ ರಾಜಭವನದಲ್ಲಿ ಸುಮಾರು ಅರ್ಧ ಗಂಟೆ ರಾಜ್ಯಪಾಲರೊಂದಿಗೆ ನಿತೀಶ್ ಮಾತುಕತೆ ನಡೆಸಿದ್ದು, ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಯಾವ ಕಾರಣಕ್ಕಾಗಿ ರಾಜಭವನಕ್ಕೆ ಸಿಎಂ ದಿಢೀರ್ ತೆರಳಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ, ಇಂದು ಸಚಿವ ಸಂಪುಟ ಸಭೆ ಕೇವಲ 15 ನಿಮಿಷಗಳಲ್ಲಿ ಮುಕ್ತಾಯಗೊಂಡಿರುವುದು ಆಗಿನ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.
ಇದನ್ನು ಓದಿ:ಡಿಸಿಎಂ ತೇಜಸ್ವಿ ಬಿಟ್ಟು ರಾಜ್ಯಪಾಲರ ಭೇಟಿಯಾದ ಸಿಎಂ ನಿತೀಶ್; ಬಿಹಾರದಲ್ಲಿ ಆಟ ಶುರು ಎಂದ ಮಾಂಝಿ