ಸಾಗರ್(ಮಧ್ಯಪ್ರದೇಶ): ಇಲ್ಲಿನ ರಾಹ್ಲಿ ಅಸೆಂಬ್ಲಿ ವ್ಯಾಪ್ತಿಯ ಶಹಪುರ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಗೋಡೆ ಕುಸಿದು 9 ಮಕ್ಕಳು ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆಯಿತು. ಮಣ್ಣಿನಿಂದ ಶಿವಲಿಂಗ ತಯಾರಿಸಲು ಅನೇಕ ಮಕ್ಕಳು ಸೇರಿದ್ದರು. ಆಗ ಮಣ್ಣಿನ ಗೋಡೆ ದಿಢೀರ್ ಕುಸಿದಿದೆ.
ಮಣ್ಣಿನ ಗೋಡೆಯ ಆಸರೆಯಲ್ಲಿ ಮಕ್ಕಳು ಕುಳಿತು ಶಿವಲಿಂಗ ತಯಾರಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.
ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಗೋಪಾಲ ಭಾರ್ಗವ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದರು. ಮೃತಪಟ್ಟ ಮಕ್ಕಳು ಮತ್ತು ಗಾಯಗೊಂಡ ಮಕ್ಕಳನ್ನು ಸಾಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಹಪುರ ನಗರದ ಸ್ಥಳೀಯರು ಹೇಳುವಂತೆ, ಕುಟಿ ದೇವಸ್ಥಾನದ ಬಳಿ ಶಿವಲಿಂಗ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು (ಭಾನುವಾರ) ಹಲವು ಮಕ್ಕಳು ಶಿವಲಿಂಗ ತಯಾರಿಸಲು ಬಂದಿದ್ದರು. ದೇವಸ್ಥಾನದ ಬಳಿ ಮಣ್ಣಿನ ಗೋಡೆಯ ಆಸರೆಯಲ್ಲಿ ಕುಳಿತು ಲಿಂಗ ನಿರ್ಮಿಸುತ್ತಿದ್ದರು. 9 ಗಂಟೆಯ ಸುಮಾರಿಗೆ ಮಣ್ಣಿನ ಗೋಡೆ ಕುಸಿದು ಬಿತ್ತು. ಅವಶೇಷಗಳಡಿ ಸಿಲುಕಿ ಒಂಭತ್ತು ಮಕ್ಕಳು ಮೃತಪಟ್ಟರು. ಸ್ಥಳದಲ್ಲಿದ್ದವರು ಮಕ್ಕಳನ್ನು ರಕ್ಷಿಸಲು ಹರಸಾಹಸಪಟ್ಟರು. ಆದರೆ, ರಕ್ಷಣೆ ಸಾಧ್ಯವಾಗಲಿಲ್ಲ. ಭಾನುವಾರವಾದ್ದರಿಂದ ವೈದ್ಯರು ಸ್ಥಳೀಯ ಉಪ ಆರೋಗ್ಯ ಕೇಂದ್ರಕ್ಕೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ತಕ್ಷಣ ಚಿಕಿತ್ಸೆ ಸಿಗಲಿಲ್ಲ.
ಸಿಎಂ ಮೋಹನ್ ಯಾದವ್ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿ, ತಲಾ 4 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.
ಇದನ್ನೂ ಓದಿ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು-ಬಸ್ ಡಿಕ್ಕಿ: 7 ಜನ ಸಾವು, 45 ಮಂದಿಗೆ ಗಾಯ - UP Road Accident