ನವದೆಹಲಿ: ಉತ್ತರಭಾರತದ ತೀವ್ರಚಳಿಯಿಂದ ಗಢಗಢ ನಡುಗುತ್ತಿದೆ. ತೀವ್ರ ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಬೆಚ್ಚನೆಯ ಆಶ್ರಯ ಪಡೆಯಲು ಮುಂದಾಗುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಹೆಚ್ಚಿನ ರಾಜ್ಯಗಳು ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾರಿ ಶೀತಗಾಳಿಯ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
IMD ಪ್ರಕಾರ, ದೆಹಲಿಯ ಬಹು ಪ್ರದೇಶಗಳಲ್ಲಿ ಡಿಸೆಂಬರ್ 15 ಮತ್ತು 16 ರಂದು ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಮೂರು ದಿನಗಳ ಕಾಲ ಕೆಲವು ಪ್ರದೇಶಗಳಲ್ಲಿ ಮಂಜು ಆವರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ನಿರ್ಗತಿಕರಿಗೆ, ಸೂರಿಲ್ಲದವರಿಗೆ ಕಾರ್ಮಿಕರ ನೆರವಿಗೆ ಹಲವಾರು ಆಶ್ರಯಧಾಮಗಳು ನವದೆಹಲಿಗರಿಗೆ ಆಶ್ರಯ ನೀಡುತ್ತಿವೆ.
ಅನಾರೋಗ್ಯದಿಂದ ಬಳಲುತ್ತಿರುವರಿಗಾಗಿ ಆಶ್ರಯ ಧಾಮಗಳನ್ನು ಸ್ಥಾಪಿಸಲಾಗಿದೆ. ದೆಹಲಿಯ AIIMS ಬಳಿಯ ಆಶ್ರಯಧಾಮದೊಂದರ ಪಾಲಕರಾದ ವಿಕ್ಕಿ ಕನೋಜಿಯಾ ಎಂಬುವವರು ಈ ಬಗ್ಗೆ ಮಾತನಾಡಿದ್ದಾರೆ. ನಿರ್ಗತಿಕರಿಗೆ ಅನಾರೋಗ್ಯಪೀಡಿತರಿಗೆ ಈ ಆಶ್ರಯಧಾಮ ನೆರವು ನೀಡುತ್ತಿದೆ. ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲದವರನ್ನು ಹುಡುಕಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಅನಾರೋಗ್ಯ ಪೀಡಿತರಿಗೆ ಔಷಧ, ಆಹಾರ ನೀಡುತ್ತಿದ್ದೇವೆ. ಬೆಳಗ್ಗೆ ಈ ಆಶ್ರಮಕ್ಕೆ ಬರುವವರಿಗೆ ಟೀ ಕೂಡ ನೀಡುತ್ತಿದ್ದೇವೆ. ಮಧ್ಯಾಹ್ನ ಮತ್ತು ಸಂಜೆ ಸಂತ್ರಸ್ತರಿಗೆ ಆಹಾರ ಒದಗಿಸಲಾಗುತ್ತಿದೆ. ಇಲ್ಲಿ ಬರುವವರಿಗೆಲ್ಲ ಹೊದ್ದುಕೊಳ್ಳಲು ಬ್ಲಾಂಕೆಟ್ ಹಾಗೂ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ವಿಕ್ಕಿ ಕನೋಜಿಯಾ ತಿಳಿಸಿದ್ದಾರೆ.
ಆಶ್ರಯ ಧಾಮದ ಕೆಲಸಕ್ಕೆ ಜನ ಫಿದಾ: ಹಲವು ವರ್ಷಗಳಿಂದ ರಾತ್ರಿ ಶೆಲ್ಟರ್ ಒಂದರಲ್ಲಿ ತಂಗಿರುವ ಸಭೋ ಅವರು ಆಶ್ರಯ ಧಾಮದ ಕೆಲಸವನ್ನು ಪ್ರಶಂಸಿದ್ದಾರೆ. ರಾತ್ರಿ ಆಹಾರ, ನೀರು, ಹೊದಿಕೆ ಇತ್ಯಾದಿಗಳ ಬಗ್ಗೆ ಹೊಗಳಿಕೆಯ ಮಾತನ್ನಾಡಿದ್ದಾರೆ. ಈ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ’’ನಾನು ಕಳೆದ 8 ವರ್ಷಗಳಿಂದ ನನ್ನ ಕುಟುಂಬದೊಂದಿಗೆ ನನ್ನ ಇಬ್ಬರು ಮಕ್ಕಳೊಂದಿಗೆ ಇಲ್ಲೇ ಇದ್ದೇನೆ. ಇಲ್ಲಿ ಉಳಿದುಕೊಳ್ಳಲು ನನಗೆ ಆಹಾರ, ಹೊದಿಕೆಯ ಸೌಲಭ್ಯವನ್ನು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಸರಾಯ್ ಕಾಲೇಖಾನ್‌ನಲ್ಲಿರುವ ಮತ್ತೊಂದು ಆಶ್ರಯಧಾಮದ ಪಾಲಕ ರಿಷಿ ಕುಮಾರ್ ಮೆಹ್ತಾ ಮಾತನಾಡಿ, ಇಲ್ಲಿ ಬರುವರಿಗೆ ಹಾಸಿಗೆ, ಹೊದಿಕೆ, ನೀರು, ಪ್ರತಿದಿನ ಚಾಯ್, ಬಿಸ್ಕತ್ತು, ಆಹಾರ ಎಲ್ಲವನ್ನೂ ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ಹಾಸಿಗೆ ಹೊದಿಕೆ ನೀಡಲಾಗಿದೆ. ಏನಾದರೂ ಆರೋಗ್ಯ ಸಮಸ್ಯೆ ಆದರೆ ಹತ್ತಿರದಲ್ಲಿ ಮೊಹಲ್ಲಾ ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಪರಿಸ್ಥಿತಿ ಸ್ವಲ್ಪ ಹೆಚ್ಚು ಗಂಭೀರವಾಗಿದ್ದರೆ ಅನಾರೋಗ್ಯಕ್ಕೆ ಇಡಾಗುವವರಿಗಾಗಿ ಆಂಬ್ಯುಲೆನ್ಸ್ ಮೂಲಕ ಏಮ್ಸ್‌ಗೆ ಕರೆದೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ತಮಗಾಗಿ ಆಶ್ರಯ ಪಡೆಯಲು ಸಾಧ್ಯವಾಗದ ಕೆಲವು ಜನರು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಸ್ಥಳ ಹುಡುಕಿಕೊಂಡು ವಿಶ್ರಾಂತಿ ಪಡೆಯುತ್ತಾರೆ. ಆದರೆ ಕೆಲವರು ರಾತ್ರಿಯಿಡೀ ಬೆಂಕಿ ಹಾಕಿಕೊಂಡು ಚಳಿಯಿಂದ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಹಳೆ ದೆಹಲಿಯ ರೈಲು ನಿಲ್ದಾಣದ ಬಳಿ ತಂಗಿರುವ ಮುಕೇಶ್ ಅವರು ರಾತ್ರಿವೇಳೆ ಆಗುವ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. "ತುಂಬಾ ಚಳಿ ಇದೆ, ನಾನು ದಿನವಿಡೀ ಕೆಲಸ ಮಾಡುತ್ತೇನೆ ಮತ್ತು ರಾತ್ರಿ ಆಗುತ್ತಿದ್ದಂತೆ ಭಯ ಶುರುವಾಗುತ್ತದೆ. ಚಳಿ ಓಡಿಸಲು ನಾವು ಬೆಂಕಿಯನ್ನು ಹಾಕಿಕೊಂಡು ಚಳಿ ಕಾಯಿಸುತ್ತೇವೆ. ನನಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ, ಕೇವಲ ಬೆಂಕಿ ಹಾಕಿಕೊಂಡು ಕೈಗಳನ್ನ ಬಿಸಿ ಮಾಡಿಕೊಂಡು ರಾತ್ರಿಯನ್ನು ಕಳೆಯುತ್ತೇನೆ" ಎಂದಿದ್ದಾರೆ.
ಇದನ್ನು ಓದಿ:ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವ ಚರಂಡಿಗೆ ಎಸೆದ ಪತ್ನಿ ಅರೆಸ್ಟ್