ಚೆನ್ನೈ: ಮಂಗಳವಾರ ಬೆಳಿಗ್ಗೆಯಿಂದ ಚೆನ್ನೈ, ಕನ್ಯಾಕುಮಾರಿ ಮತ್ತು ಪುದುಕೊಟ್ಟೈ ಸೇರಿದಂತೆ ತಮಿಳುನಾಡಿನ 12 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ನಡೆಸುತ್ತಿದೆ. ನಿಷೇಧಿತ ಹಿಜ್ಬ್ ಉತ್-ತಹ್ರಿರ್ (ಎಚ್ಯುಟಿ) ಭಯೋತ್ಪಾದಕ ಸಂಘಟನೆಯ ನೇಮಕಾತಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ ಎಂದು ಎನ್ಐಎ ತಿಳಿಸಿದೆ.
ಹಿಜ್ಬ್ ಉತ್-ತಹ್ರಿರ್ ತನ್ನ ಸಂವಿಧಾನದಿಂದ ಆಳಲ್ಪಡುವ ಇಸ್ಲಾಮಿಕ್ ರಾಜ್ಯವನ್ನು ರಚಿಸಲು ಪ್ರಯತ್ನಿಸುತ್ತದೆ ಎಂದು ಆರೋಪಿಸಲಾಗಿದ್ದು, ಇದನ್ನು ಗುಂಪಿನ ಸಂಸ್ಥಾಪಕ ತಾಕಿ ಅಲ್-ದಿನ್ ಅಲ್-ನಭಾನಿ ಸ್ವತಃ ಬರೆದಿದ್ದಾನೆ ಎಂದು ಹೇಳಲಾಗಿದೆ. ತಮಿಳುನಾಡು ಪೊಲೀಸರಿಂದ ಈ ಪ್ರಕರಣವನ್ನು ತನಗೆ ವರ್ಗಾಯಿಸಿಕೊಂಡಿರುವ ಎನ್ಐಎ, ಈ ಕುರಿತು ತೀವ್ರ ತನಿಖೆ ನಡೆಸುತ್ತಿದೆ.
ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಬೆನ್ನಲ್ಲೇ ಎನ್ಐಎ ಆಗಸ್ಟ್ 31ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶ ತೊರೆಯುವ ಪ್ರಯತ್ನದಲ್ಲಿದ್ದ ಜಲೀಲ್ ಅಜೀಜ್ ಅಹ್ಮದ್ ಎಂಬಾತನನ್ನು ಬಂಧಿಸಿತ್ತು. ಅಜೀಜ್ ಅಹ್ಮದ್ ಬಂಧನವನ್ನು ಭಾರತದಲ್ಲಿ ಈ ಗುಂಪಿನ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಮೂಲಭೂತವಾದ ಮತ್ತು ಉಗ್ರರ ನೇಮಕಾತಿ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ವಿಶಾಲ ಜಾಲದ ಬಗ್ಗೆ ಎನ್ಐಎ ತನಿಖೆ ಮುಂದುವರಿಸಿದೆ. ಗುಪ್ತಚರ ಮಾಹಿತಿಯ ನಂತರ ತಮಿಳುನಾಡು ಪೊಲೀಸರು ಈ ವರ್ಷದ ಆಗಸ್ಟ್ 1ರಂದು ಹಿಜ್ಬ್ ಉತ್-ತಹ್ರಿರ್ನ ಆರು ಜನ ಬೆಂಬಲಿಗರನ್ನು ಬಂಧಿಸಿದ್ದರು.
ನಂತರ ಪೊಲೀಸರು ಎಂಜಿನಿಯರಿಂಗ್ ಪದವೀಧರ ಹಮೀದ್ ಹುಸೈ, ಆತನ ತಂದೆ ಮತ್ತು ಸಹೋದರನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಿದ್ದರು. ಈ ಮೂವರನ್ನು ವಿಚಾರಣೆ ನಡೆಸಿದ ನಂತರ, ಚೆನ್ನೈ ಮತ್ತು ಉತ್ತರ ತಾಂಬರಂ ಪ್ರದೇಶಗಳಲ್ಲಿ ದಾಳಿ ನಡೆಸಿದ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಹುಸೇನ್ ನಿಷೇಧಿತ ಸಂಘಟನೆಗೆ ನೇಮಕಾತಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, ಇಸ್ಲಾಮಿಕ್ ಕ್ಯಾಲಿಫೇಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ಆಗ ಹೇಳಿದ್ದರು. ಕೆಲವು ವೀಡಿಯೊಗಳಲ್ಲಿ ಆತ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವೂ ಮಾತನಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಹಿಜ್ಬುಲ್-ಉದ್-ತಹ್ರಿರ್ಗೆ ಸಂಬಂಧಿಸಿದ 16 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಅರ್ಧದಷ್ಟು ಜನರು ಇಸ್ಲಾಂಗೆ ಮತಾಂತರಗೊಂಡವರು. ಈ ತೀವ್ರಗಾಮಿ ಸಂಘಟನೆಯ ಗುರಿ ಇಸ್ಲಾಮಿಕ್ ರಾಷ್ಟ್ರವನ್ನು ರಚಿಸುವುದಾಗಿದೆ. ಈ ಸಂಘಟನೆಯನ್ನು 1952ರಲ್ಲಿ ಜೆರುಸಲೇಂನಲ್ಲಿ ಆರಂಭಿಸಲಾಯಿತು. ಇದರ ಪ್ರಸ್ತುತ ಪ್ರಧಾನ ಕಚೇರಿ ಲಂಡನ್‌ನಲ್ಲಿದೆ.
ಇದನ್ನೂ ಓದಿ: ನಟಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ: ಮಲಯಾಳಂ ನಟ ಸಿದ್ದಿಕ್ ಜಾಮೀನು ಅರ್ಜಿ ವಜಾ - Malayalam Actor Siddique