ಡೆಹ್ರಾಡೂನ್(ಉತ್ತರಾಖಂಡ): ರಾಜ್ಯದಲ್ಲಿ ಯಾವುದೇ ಪ್ರತಿಭಟನೆಯ ವೇಳೆ ಸರ್ಕಾರಿ ಅಥವಾ ಖಾಸಗಿ ಆಸ್ತಿಗೆ ಹಾನಿ ಮಾಡಿದರೆ ಇನ್ನು ಮುಂದೆ ತಕ್ಕ ಶಿಕ್ಷೆಯಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿ ಮಾಡಲು ನಿರ್ಧರಿಸಿದೆ. ಪ್ರತಿಭಟನೆಯ ವೇಳೆ ಆಸ್ತಿಗೆ ಹಾನಿ ಮಾಡುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಅವರಿಂದ ಹಣ ವಸೂಲಿ ಸಂಬಂಧ ಕಾನೂನು ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸದ್ಯದ ಮಾಹಿತಿ ಪ್ರಕಾರ, ಉತ್ತರಾಖಂಡದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ ಮಸೂದೆಯನ್ನು ಸರ್ಕಾರ ಶೀಘ್ರದಲ್ಲೇ ಸದನದಲ್ಲಿ ಮಂಡಿಸಬಹುದು.
ಹಲ್ದ್ವಾನಿ ಹಿಂಸಾಚಾರದ ನಂತರ, ಗಲಭೆ ಅಥವಾ ಗಲಭೆ ಸೃಷ್ಟಿಸುವವರ ವಿರುದ್ಧ ಸರ್ಕಾರ ಕಠಿಣ ನಿರ್ಧಾರ ತಳೆದಿದೆ. ಹಿಂಸಾಚಾರದಂತಹ ಪ್ರಕರಣಗಳಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಪುಷ್ಪರ್ ಸಿಂಗ್ ಧಾಮಿ ಈಗಾಗಲೇ ಸಂದೇಶ ರವಾನಿಸಿದ್ದಾರೆ. ಯಾರು ಪ್ರತಿಭಟನೆಯಲ್ಲಿ ಅನಾಹುತ ಸೃಷ್ಟಿಸುತ್ತಾರೋ, ಆಸ್ತಿಗಳಿಗೆ ಹಾನಿಮಾಡುತ್ತಾರೋ ಅವರಿಂದ ಹಣ ವಸೂಲಿ ಮಾಡಲು ಕಾನೂನು ಅನುವು ಮಾಡಿಕೊಂಡಲಿದೆ. ನೆರೆ ರಾಜ್ಯ ಉತ್ತರ ಪ್ರದೇಶದಂತೆಯೇ ಉತ್ತರಾಖಂಡ ಸರ್ಕಾರವೂ ಕೂಡಾ ಈ ವಿಷಯದಲ್ಲಿ ಕಠಿಣ ಕಾನೂನು ತರುವ ಮೂಲಕ ಅಂಥವರಿಗೆ ಪಾಠ ಕಲಿಸಲು ಯೋಚಿಸಿದೆ.
ಈ ಕಾನೂನಿನಡಿ ಯಾವುದೇ ಅಡಚಣೆಯ ಸಂದರ್ಭದಲ್ಲಿ, ಸರ್ಕಾರಿ ಆಸ್ತಿ ಅಥವಾ ಖಾಸಗಿ ಆಸ್ತಿಗೆ ಯಾವುದೇ ನಷ್ಟ ಉಂಟಾದರೆ, ಆರೋಪಿಗಳಿಂದಲೇ ಪರಿಹಾರ ಪಡೆಯಬಹುದು. ಮುಂದಿನ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಬಹುದು ಎಂಬ ನಿರೀಕ್ಷೆ ಇದೆ. ಇದಕ್ಕಾಗಿ ನ್ಯಾಯಮಂಡಳಿ ರಚಿಸಿ ಇಂತಹ ಪ್ರಕರಣಗಳ ವಿಚಾರಣೆಗೆ ವ್ಯವಸ್ಥೆ ಮಾಡಲಾಗುವುದು. ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರಕಾರ ಇದಕ್ಕೆ ಸಂಬಂಧಿಸಿದ ವಿಧೇಯಕ ತರಬಹುದು ಎಂಬ ಮಾಹಿತಿ ಇದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: 7ನೇ ಸಮನ್ಸ್ ಬಳಿಕವೂ ವಿಚಾರಣೆಗೆ ಹಾಜರಾಗದ ದೆಹಲಿ ಸಿಎಂ ಕೇಜ್ರಿವಾಲ್