ಚಂಡೀಗಢ: ಕೇಂದ್ರದ ಎನ್‌ಡಿಎ ಸರ್ಕಾರದ ಬಲಾಬಲದ ಬಗ್ಗೆ ಪ್ರಶ್ನಿಸುತ್ತಿರುವ ವಿಪಕ್ಷಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದು, ಮೈತ್ರಿ ಸರ್ಕಾರವು 5 ವರ್ಷಗಳ ತನ್ನ ಅವಧಿಯನ್ನು ಪೂರ್ಣಗೊಳಿಸುವುದಲ್ಲದೆ, 2029 ರಲ್ಲಿಯೂ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಣಿಮಜರಾ ನೀರು ಸರಬರಾಜು ಯೋಜನೆಯನ್ನು ಭಾನುವಾರ ಉದ್ಘಾಟಿಸಿದ ನಂತರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವರು, "ಪ್ರತಿಪಕ್ಷಗಳು ವಿನಾಕಾರಣ ಶಂಕೆ ವ್ಯಕ್ತಪಡಿಸುತ್ತಿವೆ. ಇದನ್ನು ನಾವು ಲೆಕ್ಕಸಿಬೇಕಿಲ್ಲ. ನಾವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. 2029 ರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ" ಎಂದು ಅವರು ಹೇಳಿದರು.
ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಅಲ್ಪ ಪ್ರಮಾಣದ ಯಶಸ್ಸು ಸಿಕ್ಕಿದೆ ಎಂದು ಕೆಲ ವಿಪಕ್ಷಗಳು (ಕಾಂಗ್ರೆಸ್) ಬೀಗುತ್ತಿವೆ. ಕಳೆದ ಮೂರು ಚುನಾವಣೆಗಳಲ್ಲಿ (2014, 2019, 2024) ಕಾಂಗ್ರೆಸ್ ಪಡೆದ ಸ್ಥಾನಗಳ ಸಂಖ್ಯೆಗಿಂತಲೂ ಈ ಚುನಾವಣೆಯಲ್ಲಿ (2024 ಲೋಕಸಭೆ ಚುನಾವಣೆ) ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ. ಎನ್‌ಡಿಎ ಕೂಟದಲ್ಲಿ ಬಿಜೆಪಿ ಪಕ್ಷ ಮಾತ್ರ ಹೊಂದಿರುವ ಸಂಖ್ಯೆಗಳಷ್ಟು ಇಡೀ I.N.D.I.A ಕೂಟದ ಸಂಖ್ಯೆಯಿಲ್ಲ. ಅದು ವಿಪಕ್ಷಗಳಿಗೆ ಅರ್ಥವಾಗುತ್ತಿಲ್ಲ ಎಂದು ತಿವಿದರು.
"ಸರ್ಕಾರ ಕೆಲವೇ ದಿನಗಳಲ್ಲಿ ಪತನವಾಗಲಿದೆ ಎಂದು ಹೇಳುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಸರ್ಕಾರವು ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಲ್ಲದೆ, ಮುಂದಿನ ಅವಧಿಗೂ ಈ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ನಾನು ಪ್ರತಿಪಕ್ಷದ ಸ್ನೇಹಿತರಿಗೆ ಭರವಸೆ ನೀಡಲು ಬಯಸುತ್ತೇನೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಮತ್ತು ಪ್ರತಿಪಕ್ಷದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧರಾಗಿರಿ" ಎಂದು ಅವರು ಹೇಳಿದರು.