ಚಂಡೀಗಢ: ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ದಲಿತ ನಾಯಕ ನಯಾಬ್ ಸಿಂಗ್ ಸೈನಿ ಇಂದು ಸತತ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಪಂಚಕುಲದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಹಾಜರಿದ್ದರು.
ಸೈನಿ ಜೊತೆಯಲ್ಲಿ ಅಂಬಾಲಾ ಕಂಟೋನ್ಮೆಟ್ನ ಶಾಸಕ ಅನಿಲ್ ವಿಜ್, ಇಸ್ರಾನಾ ಶಾಸಕ ಕೃಷ್ಣ ಲಾಲ್ ಪನ್ವಾರ್, ಬಡ್ಶಹಪುರ್ ಶಾಸಕ ರಾವ್ ನರ್ಬಿರ್ ಸಿಂಗ್, ತೊಶಮ ಶಾಸಕ ಶೃತಿ ಚೌಧರಿ, ಅಥೆಲಿ ಶಾಸಕ ಅರ್ತಿ ಸಿಂಗ್ ರಾವ್ ಮತ್ತು ರಾಡೌರ್ ಶಾಸಕ ಶ್ಯಾಮ್ ಸಿಂಗ್ ರಾಣಾ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲ ಬಂಡಾರು ದತ್ತಾತ್ರೇಯ ಪ್ರಮಾಣವಚನ ಬೋಧಿಸಿದರು.
ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ಆಂಧ್ರ ಪ್ರದೇಶ ಸೇರಿದಂತೆ ಎನ್ಡಿಎ ಆಡಳಿತದ ಮುಖ್ಯಮಂತ್ರಿಗಳು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಉಪಸ್ಥಿತರಿದ್ದರು.
ಪ್ರಮಾಣವಚನಕ್ಕೂ ಮುನ್ನ ಸೈನಿ, ವಾಲ್ಮೀಕಿ ಭವನ ಹಾಗೂ ಗುರುದ್ವಾರದಲ್ಲಿ ಪ್ರಾರ್ಥನೆಯಲ್ಲಿ ಭಾಗಿಯಾದರು. ಪಂಚಕುಲದ ಮನ್ಸಾ ದೇವಿ ದೇಗುಲಕ್ಕೂ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹರಿಯಾಣ ತ್ವರಿತಗತಿಯ ಅಭಿವೃದ್ಧಿಪಥದಲ್ಲಿ ಸಾಗಲಿದೆ. ರಾಜ್ಯದ ಜನರು ಮೋದಿ ಸರ್ಕಾರದ ನೀತಿಗಳ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ" ಎಂದು ಹೇಳಿದರು.
90 ವಿಧಾನಸಭೆ ಕ್ಷೇತ್ರಗಳಿರುವ ಹರಿಯಾಣ ವಿಧಾನಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಗೆದ್ದ ಹಿಸ್ಸಾರ್ನ ಶಾಸಕಿ ಸಾವಿತ್ರಿ ಜಿಂದಾಲ್ ಸೇರಿದಂತೆ ಮೂವರು ಸ್ವತಂತ್ರ ಅಭ್ಯರ್ಥಿಗಳು ಕೂಡ ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಾಗಿ ಅರುಣ ಕುಮಾರ ನಂಬೂದಿರಿ ನೇಮಕ