ಪಂಚಕುಲ: ಹರಿಯಾಣ ಬಿಜೆಪಿ ಶಾಸಕಾಂಗದ ಪಕ್ಷದ ನಾಯಕರಾಗಿ ನಯಾಬ್ ಸಿಂಗ್ ಸೈನಿ ಅವರನ್ನು ಇಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ಕೇಂದ್ರ ವೀಕ್ಷಕರಾದ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಭೆಯಲ್ಲಿ ಉಪಸ್ಥಿತರಿದ್ದರು.
ಇದಾದ ಬಳಿಕ ಸೈನಿ, ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ರಾಜಭವನದಲ್ಲಿ ಭೇಟಿಯಾಗಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಅಕ್ಟೋಬರ್ 17ರಂದು ನೂತನ ಮುಖ್ಯಮಂತ್ರಿಯಾಗಿ ಸೈನಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭ ಶಾಲಿಮರ್ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟದ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.
ಸೈನಿ ಜೊತೆಗೆ ಎಷ್ಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ಮೊದಲು ಅಕ್ಟೋಬರ್ 15ರಂದು ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿತ್ತು. ಪ್ರಧಾನಿ ಅಲಭ್ಯತೆಯಿಂದಾಗಿ ಅಕ್ಟೋಬರ್ 17ರಂದು ಮರುನಿಗದಿಪಡಿಸಲಾಗಿದೆ.
90 ಕ್ಷೇತ್ರಗಳ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 37 ಸ್ಥಾನಗಳಲ್ಲಿ ಜಯ ಗಳಿಸಿತ್ತು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಪ್ರಮಾಣವಚನ; ಇಂಡಿಯಾ ಒಕ್ಕೂಟದ ನಾಯಕರಿಂದ ಶುಭಾಶಯ