ನವದೆಹಲಿ: ಬಿಜೆಪಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಘೋಷಣೆ ಅಗತ್ಯವಿಲ್ಲ ಮತ್ತು 'ಹಮ್ ಉಂಕೆ ಸಾಥ್, ಜೋ ಹುಮಾರೆ ಸಾಥ್' (ನಮ್ಮೊಂದಿಗೆ ಇರುವವರ ಜೊತೆ ನಾವಿದ್ದೇವೆ) ಎಂದು ಮಾತ್ರ ಹೇಳಬೇಕಿದೆ ಎಂಬ ಪಶ್ಚಿಮ ಬಂಗಾಳದ ಮುಖಂಡ ಸುವೇಂದು ಅಧಿಕಾರಿ ಹೇಳಿಕೆ ಬಗ್ಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಪ್ರತಿಕ್ರಿಯಿಸಿದ್ದಾರೆ.
ಸುವೇಂದು ಅಧಿಕಾರಿ ಬಿಜೆಪಿಗೆ ಹೊಸಬರು. ಕೆಲವೇ ವರ್ಷಗಳ ಹಿಂದೆಯಷ್ಟೇ ಪಕ್ಷಕ್ಕೆ ಸೇರಿದ್ದಾರೆ. ಟಿಎಂಸಿಯಲ್ಲಿದ್ದ ಅವರಿಗೆ ಹಿಂದಿನ ರಾಜಕೀಯ ಅನುಭವಗಳ ಪ್ರಭಾವ ಇನ್ನೂ ಇರಬಹುದು. ಟಿಎಂಸಿಯಲ್ಲಿ ಕೇವಲ ಅಧಿಕಾರವನ್ನು ಗಳಿಸುವುದರ ಮೇಲೆ ಗಮನ ಕೇಂದ್ರೀಕೃತವಾಗಿತ್ತು. ಸುವೇಂದು ಅಧಿಕಾರಿ ಬಿಜೆಪಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಂತೆ, ಪಕ್ಷವು ವಿಭಿನ್ನವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಅವರು ಅರಿತುಕೊಳ್ಳುತ್ತಾರೆ ಎಂದು ಜಮಾಲ್ ಸಿದ್ದಿಕಿ ತಿಳಿಸಿದ್ದಾರೆ.
#WATCH | Delhi: On Suvendu Adhikari's statement, " jo humare saath, hum unke saath, national president of the bjp minority morcha, jamal siddiqui says, "suvendu adhikari is new to the bjp, joined only a few years ago, and may still be influenced by his past political experiences… pic.twitter.com/5dkyuSZAAL
— ANI (@ANI) July 20, 2024
ಅಲ್ಲದೇ, ತಮ್ಮ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯು ಭಾವನಾತ್ಮಕ ಮತ್ತು ನಿರಾಶೆಯ ಕ್ಷಣದಲ್ಲಿ ಬಂದಿದೆ. ಆದರೆ, ಬಿಜೆಪಿಯು ಇಂತಹ ಭಾವನಾತ್ಮಕ ಪ್ರಚೋದನೆಗಳ ಮೇಲೆ ಕಾರ್ಯ ನಿರ್ವಹಿಸುವುದಿಲ್ಲ ಮತ್ತು ಬದಲಿಗೆ ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಎಲ್ಲರನ್ನೂ ಜೊತೆಗೆ ಕರೆದೊಯ್ಯುವತ್ತ ಗಮನಹರಿಸುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಭಾರತೀಯ ಜನತಾ ಪಕ್ಷದ ಆತ್ಮವಾಗಿದೆ. ಆತ್ಮವಿಲ್ಲದೆ ದೇಹವು ನಿಷ್ಪ್ರಯೋಜಕವಾಗಿದೆ. ಅದೇ ರೀತಿ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಇಲ್ಲದೆ ಬಿಜೆಪಿ ಏನೂ ಅಲ್ಲ. ಬಿಜೆಪಿ ಹುಟ್ಟುಹಾಕಿದ್ದು ಅಧಿಕಾರಕ್ಕಾಗಿ ಅಲ್ಲ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕನಸುಗಳನ್ನು ನನಸಾಗಿಸಲು ಮತ್ತು ಅವರ 'ಅಂತ್ಯೋದಯ' ಸಿದ್ಧಾಂತವನ್ನು ನನಸಾಗಿಸಲು. ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದ, ನೊಂದವರ, ವಂಚಿತ ಮತ್ತು ತೊಂದರೆಗೀಡಾದ ವ್ಯಕ್ತಿಯ ಮುಖದಲ್ಲಿ ನಗು ತರಿಸುವುದೇ ಬಿಜೆಪಿಯ ಗುರಿಯಾಗಿದೆ. ಇದೇ ಬಿಜೆಪಿಯ ಉದ್ದೇಶವೂ ಆಗಿದ್ದು, ಈ ಉದ್ದೇಶದೊಂದಿಗೆ ಅದು ಮುನ್ನಡೆಯುತ್ತಿದೆ ಎಂದು ಜಮಾಲ್ ಸಿದ್ದಿಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಮೊದಲ ಬಾರಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಬಿಜೆಪಿ ಘೋಷಣೆ ನೀಡಿತ್ತು. ನಂತರ 2019ರಲ್ಲಿ ಇದನ್ನು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್' ಎಂದು ವಿಸ್ತರಿಸಿತ್ತು. ಆದರೆ, ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಸುವೇಂದು, ನಾನು ರಾಷ್ಟ್ರೀಯವಾದಿ ಮುಸ್ಲಿಮರಿಗಾಗಿಯೂ ಮಾತನಾಡಿದ್ದೇನೆ. ನಾವೆಲ್ಲರೂ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಹೇಳುತ್ತಿದ್ದೆವು. ಆದರೆ, ನಾನು ಇದನ್ನು ಇನ್ಮುಂದೆ ಹೇಳುವುದಿಲ್ಲ. 'ಹಮ್ ಉಂಕೆ ಸಾಥ್, ಜೋ ಹುಮಾರೆ ಸಾಥ್' ಆಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ಅಲ್ಪಸಂಖ್ಯಾತ ಮೋರ್ಚಾವೂ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯು ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ': ಬಿಜೆಪಿ ನಾಯಕ ಸುವೇಂದು ಅಧಿಕಾರಿ