ಹೈದರಾಬಾದ್: ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರ ವಿಚ್ಛೇದನ ಕುರಿತು ವಿವಾದಿತ ಹೇಳಿಕೆ ನೀಡಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರ ವಿರುದ್ಧ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಚಿವೆಯ ಹೇಳಿಕೆಯಿಂದ ತಮ್ಮ ಕುಟುಂಬ ಸದಸ್ಯರ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಕೋರಿ ನಾಂಪಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬಿಆರ್ಎಸ್ ಕಾರ್ಯಾಧ್ಯಕ್ಷ, ಮಾಜಿ ಸಚಿವ ಕೆ.ಟಿ.ರಾಮರಾವ್ ಅವರನ್ನು ಟೀಕಿಸುವ ಭರದಲ್ಲಿ ಚಿತ್ರನಟರ ವೈಯಕ್ತಿಕ ಜೀವನದ ಬಗ್ಗೆ ಸಚಿವೆ ಮಾತನಾಡಿದ್ದರು. ಅದರಲ್ಲೂ ಸಮಂತಾ, ನಾಗ ಚೈತನ್ಯ ವಿಚ್ಛೇದನ, ನಾಗಾರ್ಜುನ ಅವರ ಕನ್ವೆನ್ಶನ್ ಹಾಲ್ ಬಗ್ಗೆ ಹೇಳಿದ್ದು, ಭಾರಿ ವೈರಲ್ ಆಗಿದೆ. ಇದರಿಂದ ಅಕ್ಕಿನೇನಿ ಕುಟುಂಬ ತಿರುಗಿಬಿದ್ದಿದ್ದು, ಸುರೇಖಾ ಅವರ ಹೇಳಿಕೆಯನ್ನು ಖಂಡಿಸಿದೆ.
ಟಾಲಿವುಡ್ ಕಲಾವಿದರಿಂದ ಟೀಕೆ: ಸಚಿವೆಯ ಕೀಳುಮಟ್ಟದ ಹೇಳಿಕೆಯನ್ನು ಟಾಲಿವುಡ್ ಸಿನಿಮಾ ನಟ, ನಟಿಯರು ಟೀಕಿಸಿದ್ದಾರೆ. ಚಿರಂಜೀವಿ, ಮಹೇಶ್ ಬಾಬು, ಜೂನಿಯರ್ ಎನ್ಟಿಆರ್, ನಾನಿ, ರವಿತೇಜ, ಮಂಚು ಮನೋಜ್, ಸಂಯುಕ್ತಾ ಮೆನನ್, ವಿಜಯ್ ದೇವರಕೊಂಡ ಸೇರಿದಂತೆ ಹಲವರು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಸಚಿವೆಯ ಹೇಳಿಕೆಗಳನ್ನು ಜರಿದಿದ್ದಾರೆ. ಇನ್ನೊಬ್ಬರ ವೈಯಕ್ತಿಕ ಜೀವನವನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಸಮಂತಾ ಅವರ ಕ್ಷಮೆ ಕೋರಿದ ಸಚಿವೆ: ತಮ್ಮ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಬಳಿಕ, ಸಚಿವೆ ಕೊಂಡಾ ಸುರೇಖಾ ಅವರು ನಟಿ ಸಮಂತಾ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವೆ, ತಮ್ಮ ಹೇಳಿಕೆಯ ಉದ್ದೇಶವು ಮಹಿಳೆಯರ ಬಗ್ಗೆ ಬಿಆರ್ಎಸ್ ನಾಯಕ ಹೊಂದಿರುವ ಕೀಳು ಅಭಿರುಚಿಯನ್ನು ತೋರಿಸುವುದಾಗಿತ್ತು. ನಟಿ ಸಮಂತಾ ಅವರ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ. ನಟಿ ಸ್ವಾವಲಂಬನೆಯಿಂದ ಬೆಳೆದು ಬಂದ ರೀತಿ ಮಾದರಿಯಾಗಿದೆ. ನನ್ನ ಹೇಳಿಕೆಯಿಂದ ಸಮಂತಾ ಹಾಗೂ ಅವರ ಅಭಿಮಾನಿಗಳಿಗೆ ನೋವು ಮಾಡಿದ್ದಲ್ಲಿ ಬೇಷರತ್ತಾಗಿ ಕ್ಷಮೆ ಕೋರಿ, ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.