ಮುಂಬೈ: ಬುಧವಾರ ಸಂಜೆ ಸುರಿದ ಮಹಾ ಮಳೆಗೆ ತತ್ತರಿಸಿರುವ ಮುಂಬೈ ಮಂದಿ ಇಂದು ಟ್ರಾಫಿಕ್ ಸಮಸ್ಯೆಗೆ ಹೈರಾಣಾದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳಿಗಳ ಮೇಲೆಲ್ಲಾ ನೀರು ನಿಂತು ಲೋಕಲ್ ಟ್ರೈನ್ಗಳ ಸಂಚಾರ ಬಂದ್ ಆಗಿದೆ. 14 ವಿಮಾನಗಳ ಮಾರ್ಗ ಬದಲಾಯಿಲಾಗಿದೆ.
ಥಾಣೆ, ಪಾಲ್ಘಾರ್ ಮತ್ತು ರಾಯ್ಗಢದಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಮುಂಬೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಇಂದು ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಥಾಣೆ, ಪಾಲ್ಘಾರ್ನಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ. ಈ ಕುರಿತು ಬಿಎಂಸಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಬರಬೇಡಿ ಎಂದಿದೆ.
ಬುಧವಾರ ಸುರಿದ ಧಾರಾಕಾರ ಮಳೆಗೆ ಅಂಧೇರಿಯಲ್ಲಿ 45 ವರ್ಷದ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ಗಂಟೆಗಳಷ್ಟು ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ನದಿಗಳಂತಾಗಿದ್ದು, ಹಲವು ಪ್ರದೇಶದಲ್ಲಿ 100 ಮಿಲಿಮೀಟರ್ ಮಳೆಯಾಗಿದೆ.
ಕುರ್ಲಾ ಮತ್ತು ಥಾಣೆ ನಡುವಿನ ಲೋಕಲ್ ಟ್ರೈನ್ ಸಂಚಾರ ಬಂದ್ ಆಗಿದ್ದು, ಸಾವಿರಾರು ಜನರು ಸಮಸ್ಯೆ ಎದುರಿಸಿದರು. ರೈಲು ಸಂಚಾರ ಸ್ತಬ್ಧಗೊಂಡು ಸಿಎಸ್ಎಂಟಿ ಮತ್ತು ಇತರೆ ಪ್ರದೇಶದಲ್ಲಿ ಜನಜಂಗುಳಿ ಉಂಟಾಯಿತು. ಅನೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. ವಿದ್ಯಾವಿಹಾರ್ ಮತ್ತು ಮುಲುಂಡ್ ನಡುವೆ ಸೇರಿದಂತೆ ವಿವಿಧ ಮಾರ್ಗಗಳ ಹಳಿಗಳು ಕೂಡ ಜಲಾವೃತಗೊಂಡಿವೆ. ಭಾರಿ ಮಳೆಯ ಹೊರತಾಗಿಯೂ ಪಶ್ಚಿಮ ರೈಲ್ವೆ ಸಬ್ಅರ್ಬನ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ.
ಬಿಎಂಸಿ ದತ್ತಾಂಶದ ಪ್ರಕಾರ, ಬುಧವಾರ ಸಂಜೆ 5ರಿಂದ ರಾತ್ರಿ 10ಗಂಟೆವರೆಗೆ ಸುರಿದ ಮಳೆಯಿಂದಾಗಿ ಪೂರ್ವ ಮತ್ತು ದಕ್ಷಿಣ ಸಬ್ ಅರ್ಬನ್ನಲ್ಲಿ ಕ್ರಮವಾಗಿ 87.79 ಎಂಎಂ ಮತ್ತು 167.48 ಎಂಎಂ ಮಳೆಯಾಗಿದೆ.
ಎಲ್ಲ ಸಹಾಯಕ ಆಯುಕ್ತರು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ವಾರ್ಡ್ ಕಂಟ್ರೋಲ್ ರೂಂನಲ್ಲಿದ್ದು, ಜನರಿಗೆ ನೆರವಾಗುವಂತೆ ಮುಂಬೈ ಮುನ್ಸಿಪಲ್ ಕಮಿಷನರ್ ಭೂಷಣ್ ಗಗ್ರಾನಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಹರಿಯಾಣದಲ್ಲಿ ಸದ್ದು ಮಾಡಿದ ಮುಡಾ ಪ್ರಕರಣ: ಕಾಂಗ್ರೆಸ್ ವಿರುದ್ಧ ಪಿಎಂ ಮೋದಿ ವಾಗ್ದಾಳಿ