ಮುಂಬೈ(ಮಹಾರಾಷ್ಟ್ರ): ರೀಲ್ ಮಾಡುವಾಗ ಕಮರಿಗೆ ಬಿದ್ದು ಮುಂಬೈ ಮೂಲದ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. 27 ವರ್ಷದ ಅನ್ವಿ ಕಾಮ್ದಾರ್ ಮೃತರೆಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅನ್ವಿ ಕಾಮ್ದಾರ್, ರೀಲ್ಸ್ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಮತ್ತು ಮೆಚ್ಚುಗೆ ಗಳಿಸಿದ್ದರು. ಆದರೆ, ಅದೇ ವಿಡಿಯೋ ಮಾಡುವಾಗ ಕಮರಿಗೆ ಬಿದ್ದು ಆಕೆಯ ಜೀವನವೂ ಕಮರಿ ಹೋಗಿರುವುದು ದುರಂತ.
ಮಂಗಳವಾರ, ಅನ್ವಿ ತಮ್ಮ ಏಳು ಮಂದಿ ಸ್ನೇಹಿತರೊಂದಿಗೆ ಮಾನ್ಸೂನ್ ಮಳೆಯ ಆನಂದ ಸವಿಯಲು ರಾಯಗಡ ಜಿಲ್ಲೆಯ ಮಂಗಾಂವ್‌ನ ಪ್ರಸಿದ್ಧ ಕುಂಭೆ ಜಲಪಾತಕ್ಕೆ ಹೋಗಿದ್ದರು. ಈ ವೇಳೆ ಜಲಪಾತದ ಬಳಿ 300 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮುಂಬೈನ ಮುಲುಂಡ್ ಪ್ರದೇಶದ ನಿವಾಸಿಯಾಗಿದ್ದ ಅನ್ವಿ ಕಾಮ್ದಾರ್, ಮಳೆಯ ನಡುವೆ ತನ್ನ ಸ್ನೇಹಿತರೊಂದಿಗೆ ಜಲಪಾತಕ್ಕೆ ಬಂದಿದ್ದರು. ಸುತ್ತಮುತ್ತಲಿನ ರಮಣೀಯ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾಗ ಕಾಲು ಜಾರಿ ದುರಂತ ಸಂಭವಿಸಿದೆ ಎಂದು ಮಂಗಾಂವ್ ಠಾಣಾಧಿಕಾರಿ ಮಾಹಿತಿ ನೀಡಿದರು.
ಅನ್ವಿ ಬಿದ್ದ ತಕ್ಷಣವೇ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆಕೆಯನ್ನು ಕಂದಕದಿಂದ ಮೇಲೆತ್ತಿ ಮಂಗಾಂವ್‌ನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ; ರೈತರಿಬ್ಬರಿಗೆ ಗಾಯ, ಎರಡು ಎತ್ತುಗಳು ಸಾವು