ಘಾಜಿಪುರ: ಗ್ಯಾಂಗಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆಯನ್ನು ಭಾರೀ ಬಿಗಿ ಭದ್ರತೆಯ ನಡುವೆ ಶನಿವಾರ ಘಾಜಿಪುರದ ಕಾಳಿ ಬಾಗ್ ಸಮಾಧಿ ಮೈದಾನದಲ್ಲಿ ನಡೆಸಲಾಯಿತು. ಅಪಾರ ಸಂಖ್ಯೆಯ ಬೆಂಬಲಿಗರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಅವರ ನಿವಾಸದಿಂದ ಅರ್ಧ ಕಿ.ಮೀ ದೂರದಲ್ಲಿರುವ ಕುಟುಂಬದ ಪೂರ್ವಜರ ಸಮಾಧಿ ಬಳಿಯೇ ದಫನ್ ಮಾಡಲಾಯಿತು. ಅದಕ್ಕೂ ಮುನ್ನ ಅನ್ಸಾರಿಯ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಘಾಜಿಪುರ, ಪ್ರಯಾಗ್ರಾಜ್, ಭದೋಹಿ, ಕೌಶಾಂಬಿ ಮತ್ತು ವಾರಣಾಸಿ ಸೇರಿದಂತೆ ಜಿಲ್ಲೆಗಳಿಂದ ಬಂದ ಸಾವಿರಾರು ಬೆಂಬಲಿಗರು ಅವರ ಅಂತಿಮ ದರ್ಶನ ಪಡೆದರು. ಅಂತಿಮ ವಿಧಿವಿಧಾನಗಳ ಬಳಿಕ ನಿಗದಿಗೊಳಿಸಿದ ಸ್ಥಳದಲ್ಲಿಯೇ ದಫನ್ ಮಾಡಲಾಯಿತು.
ಈ ವೇಳೆ ಅವರ ನಿವಾಸ ಸೇರಿದಂತೆ ಸ್ಮಶಾನದ ಸುತ್ತಲೂ ಅರೆಸೇನಾಪಡೆ ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಮೃತದೇಹವನ್ನು ಅವರ ಪುತ್ರ ಉಮರ್ ಅನ್ಸಾರಿ ಹಾಗೂ ಸಹೋದರ ಅಫ್ಜಲ್ ಅನ್ಸಾರಿ ಸೇರಿದಂತೆ ಕುಟುಂಬದ ಸದಸ್ಯರ ನೇತೃತ್ವದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮೂಲಕವೇ ಕಾಳಿ ಬಾಗ್ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಈ ವೇಳೆ ಕೆಲವರು ಘೋಷಣೆಗಳನ್ನು ಸಹ ಕೂಗಿದರು.
ಮುನ್ನಚ್ಚರಿಕಾ ದೃಷ್ಟಿಯಿಂದ ಸಮಾಧಿ ಮೈದಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೂ, ಸಮಾಧಿ ಸ್ಥಳಕ್ಕೆ ಕೆಲವರು ನುಗ್ಗಲು ಯತ್ನಿಸಿದರು. ಈ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅನ್ಸಾರಿ ಕುಟುಂಬ ಪೊಲೀಸರಿಗೆ ಸಹಕಾರ ನೀಡುತ್ತಿದೆ. ಶುಕ್ರವಾರ ರಾತ್ರಿಯಿಂದಲೇ ಜನರು ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸಲಾಗುತ್ತಿದೆ. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ವಾರಣಾಸಿ ರೇಂಜ್‌ನ ಡಿಐಜಿ ಒ ಪಿ ಸಿಂಗ್ ಹೇಳಿದರು.
ಇನ್ನು, ಬಂದಾ ಜೈಲಿನಲ್ಲಿದ್ದ ಅನ್ಸಾರಿ ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯರಾತ್ರಿ ಸ್ವಗ್ರಾಮಕ್ಕೆ ತರಲಾಯಿತು. ಹೃದಯಾಘಾತ ಕಾಣಿಸಿಕೊಂಡ ತಕ್ಷಣ ಅವರನ್ನು ಬಂದಾ ವೈದ್ಯಕೀಯ ಕಾಲೇಜಿನ ಐಸಿಯುಗೆ ದಾಖಲಿಸಲಾಗಿತ್ತು. ಆದರೆ, ರಾತ್ರಿ 10.30ರ ಸುಮಾರಿಗೆ ಅನ್ಸಾರಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಇವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಘಾಜಿಪುರ, ಮೌ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡಿಜಿಪಿ ಪ್ರಶಾಂತ್ ಕುಮಾರ್ ಹೈಅಲರ್ಟ್ ಘೋಷಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅದೇ ಬಿಗಿ ಭದ್ರತೆಯ ನಡುವೆ ಅವರ ಮೃತ ದೇಹವನ್ನು ಮಧ್ಯರಾತ್ರಿ ಘಾಜಿಪುರಕ್ಕೆ ತರಲಾಗಿತ್ತು. ಅಂತಿಮ ದರ್ಶನದ ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಖ್ತಾರ್ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ತರಲಾಯಿತು.
ಐದು ಬಾರಿ ಶಾಸಕರಾಗಿದ್ದ ಗ್ಯಾಂಗಸ್ಟರ್: ಮುಖ್ತಾರ್ ಅನ್ಸಾರಿ ಹಲವು ವರ್ಷಗಳಿಂದ ಎಸ್‌ಪಿ ಮತ್ತು ಬಿಎಸ್‌ಪಿಯಲ್ಲಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. 63 ವರ್ಷದ ಅನ್ಸಾರಿ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲು ಬಹುಜನ ಸಮಾಜ ಪಕ್ಷದಿಂದ ಶಾಸಕನಾಗಿದ್ದ ಅನ್ಸಾರಿ, 2002 ಮತ್ತು 2007ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. 2016ರಲ್ಲಿ ಮತ್ತೆ ಬಿಎಸ್‌ಪಿ ಸೇರಿ, ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದರು. ಮುಖ್ತಾರ್ ಅವರ ಅಂತ್ಯಕ್ರಿಯೆಯಲ್ಲಿ ಎಸ್‌ಪಿ ಅಥವಾ ಬಿಎಸ್‌ಪಿ ನಾಯಕರಾರು ಪಾಲ್ಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: 'ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲಿ ಸ್ಲೋ ಪಾಯಿಸನಿಂಗ್': ಪುತ್ರನಿಂದ ಗಂಭೀರ ಆರೋಪ - Mukhtar Ansari