ಲಖನೌ (ಉತ್ತರ ಪ್ರದೇಶ): ಮುಖ್ತಾರ್ ಅನ್ಸಾರಿ.. ಉತ್ತರ ಪ್ರದೇಶದ ರಾಜಕೀಯ ಹಾಗೂ ಅಪರಾಧ ಜಗತ್ತು ಎರಡರಲ್ಲೂ ಹೆಸರು ಮಾಡಿದ ವ್ಯಕ್ತಿ. ಗ್ಯಾಂಗಸ್ಟರ್ ಆಗಿದ್ದುಕೊಂಡು ನಂತರ ರಾಜಕೀಯಕ್ಕಿಳಿದ ಅನ್ಸಾರಿ ವಿರುದ್ಧ ಕೊಲೆಯಿಂದ ಹಿಡಿದು ಅಪಹರಣ ಕೃತ್ಯಗಳವರೆಗೆ 65 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ವಿವಿಧ ರಾಜಕೀಯ ಟಿಕೆಟ್ ಮೇಲೆ 5 ಬಾರಿ ಶಾಸಕರಾಗಿದ್ದರು ಈ ಅನ್ಸಾರಿ. 63 ವರ್ಷದ ಅನ್ಸಾರಿ ಗುರುವಾರ ಬಂಡಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
1963 ರಲ್ಲಿ ಪ್ರಭಾವಿ ಕುಟುಂಬದಲ್ಲಿ ಜನಿಸಿದ ಅನ್ಸಾರಿ, ಆಗ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸರ್ಕಾರಿ ಗುತ್ತಿಗೆ ಮಾಫಿಯಾದಲ್ಲಿ ಗುರುತಿಸಿಕೊಳ್ಳಲು ಗ್ಯಾಂಗ್ ರಚಿಸಿ ಅಪರಾಧ ಜಗತ್ತಿಗೆ ಪ್ರವೇಶಿಸಿದರು. 1978ರಲ್ಲಿ ಕೇವಲ 15 ವರ್ಷದವನಾಗಿದ್ದಾಗ ಅನ್ಸಾರಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಗಾಜಿಪುರದ ಸೈದ್ ಪುರ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಸುಮಾರು ಒಂದು ದಶಕದ ನಂತರ, 1986 ರಲ್ಲಿ ಅವರು ಗುತ್ತಿಗೆ ಮಾಫಿಯಾ ವಲಯದಲ್ಲಿ ಚಿರಪರಿಚಿತ ಮುಖವಾಗುವ ಹೊತ್ತಿಗೆ, ಗಾಜಿಪುರದ ಮುಹಮ್ಮದ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿತ್ತು. ಮುಂದಿನ ದಶಕದಲ್ಲಿ ಅನ್ಸಾರಿ ಅಪರಾಧ ಜಗತ್ತಿನ ಶಕ್ತಿಯಾಗಿ ಮಾರ್ಪಟ್ಟರು. ಅಷ್ಟೊತ್ತಿಗೆ ಅವರ ವಿರುದ್ಧ ಕನಿಷ್ಠ 14 ಗಂಭೀರ ಆರೋಪದ ಪ್ರಕರಣಗಳು ದಾಖಲಾಗಿದ್ದವು. ಆದಾಗ್ಯೂ ಅವರ ಕ್ರಿಮಿನಲ್ ಗ್ರಾಫ್ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾಗಲಿಲ್ಲ.
ಅನ್ಸಾರಿ ಅವರು 1996 ರಲ್ಲಿ ಮೌ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಟಿಕೆಟ್ ನಲ್ಲಿ ಯುಪಿ ವಿಧಾನಸಭೆಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 2002 ಮತ್ತು 2007 ರ ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೆ ಜಯಶಾಲಿಯಾದರು. 2012 ರಲ್ಲಿ ಅವರು ತಮ್ಮ ಸ್ವಂತದ ಕ್ವಾಮಿ ಏಕ್ತಾ ದಳ (ಕ್ಯೂಇಡಿ) ಹೆಸರಿನ ಪಕ್ಷ ಕಟ್ಟಿ ಮೌ ಕ್ಷೇತ್ರದಿಂದ ಮತ್ತೆ ಗೆದ್ದರು. ಅವರು 2017 ರಲ್ಲಿ ಮತ್ತೆ ಮೌನಿಂದ ಗೆದ್ದರು. 2022 ರಲ್ಲಿ ಅವರು ಸ್ಪರ್ಧಿಸಲಿಲ್ಲ. ಆದರೆ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಟಿಕೆಟ್ ಪಡೆದ ಅವರ ಪುತ್ರ ಅಬ್ಬಾಸ್ ಅನ್ಸಾರಿ 2022ರಲ್ಲಿ ಇದೇ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರು.
2005 ರಿಂದೀಚೆಗೆ 28 ಕ್ರಿಮಿನಲ್ ಪ್ರಕರಣ: 2005ರಿಂದ ಸಾಯುವವರೆಗೂ ಅನ್ಸಾರಿಯನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ನ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು. 2005 ರಿಂದೀಚೆಗೆ ಅವರ ವಿರುದ್ಧ ಕೊಲೆ ಸೇರಿದಂತೆ 28 ಕ್ರಿಮಿನಲ್ ಪ್ರಕರಣಗಳು ಹಾಗೂ ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.
37 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಶಿಕ್ಷೆ: ಸೆಪ್ಟೆಂಬರ್ 2022 ರಿಂದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಅವರು ವಿವಿಧ ನ್ಯಾಯಾಲಯಗಳಲ್ಲಿ 21 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಸುಮಾರು 37 ವರ್ಷಗಳ ಹಿಂದೆ ಮೋಸದಿಂದ ಶಸ್ತ್ರಾಸ್ತ್ರ ಪರವಾನಗಿ ಪಡೆದ ಪ್ರಕರಣದಲ್ಲಿ ಅನ್ಸಾರಿ ಅವರಿಗೆ ವಾರಾಣಸಿ ಜನಪ್ರತಿನಿಧಿಗಳ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಜೀವಾವಧಿ ಶಿಕ್ಷೆ ಮತ್ತು 2.02 ಲಕ್ಷ ರೂ. ದಂಡ ವಿಧಿಸಿತ್ತು. ಕಳೆದ 18 ತಿಂಗಳಲ್ಲಿ ಯುಪಿಯ ವಿವಿಧ ನ್ಯಾಯಾಲಯಗಳು ಅವರಿಗೆ ಶಿಕ್ಷೆ ವಿಧಿಸಿದ ಎಂಟನೇ ಪ್ರಕರಣ ಇದಾಗಿದೆ ಮತ್ತು ಎರಡನೇ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜನವರಿ 22, 1997 ರಂದು ಬಿಜೆಪಿ ಮುಖಂಡ ಮತ್ತು ಕಲ್ಲಿದ್ದಲು ವ್ಯಾಪಾರಿ ನಂದ ಕಿಶೋರ್ ರುಂಗ್ಟಾ ಅವರ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿ ನುಡಿಯದಂತೆ ಮಹಾವೀರ್ ಪ್ರಸಾದ್ ರುಂಗ್ಟಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ವಾರಣಾಸಿಯ ಜನಪ್ರತಿನಿಧಿಗಳ ನ್ಯಾಯಾಲಯವು ಅನ್ಸಾರಿಗೆ ಅವರಿಗೆ ಐದು ವರ್ಷ ಆರು ತಿಂಗಳು ಅವಧಿಯ ಜೈಲು ಶಿಕ್ಷೆ ವಿಧಿಸಿತ್ತು.
ಅಕ್ಟೋಬರ್ 27, 2023 ರಂದು, ಗಾಜಿಪುರ ಜನಪ್ರತಿನಿಧಿಗಳ ನ್ಯಾಯಾಲಯವು 2010 ರಲ್ಲಿ ದಾಖಲಾದ ಗ್ಯಾಂಗ್ ಸ್ಟರ್ ಕಾಯ್ದೆ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. ಜೂನ್ 5, 2023 ರಂದು, ವಾರಣಾಸಿ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಕಾಂಗ್ರೆಸ್ ಶಾಸಕ ಮತ್ತು ಪ್ರಸ್ತುತ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರ ಹಿರಿಯ ಸಹೋದರ ಅವದೇಶ್ ರಾಯ್ ಅವರ ಕೊಲೆ ಪ್ರಕರಣದಲ್ಲಿ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪ್ರಮುಖ ಪ್ರಕರಣಗಳು: ಆಗಸ್ಟ್ 3, 1991 ರಂದು ವಾರಾಣಸಿಯ ಲಾಹುರಾಬೀರ್ ಪ್ರದೇಶದಲ್ಲಿ ಅವದೇಶ್ ರಾಯ್ ಮತ್ತು ಅವರ ಸಹೋದರ ಅಜಯ್ ತಮ್ಮ ಮನೆಯ ಹೊರಗೆ ನಿಂತಿದ್ದಾಗ ಅವರ ಮೇಲೆ ಗುಂಡಿನ ಸುರಿಮಳೆಗೈಯಲಾಗಿತ್ತು.
ಏಪ್ರಿಲ್ 29, 2023 ರಂದು ಗಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಬಿಜೆಪಿ ಶಾಸಕ ಕೃಷ್ಣಾನಂದ್ ರಾಯ್ ಅವರ ಕೊಲೆ ಪ್ರಕರಣದಲ್ಲಿ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಸೆಪ್ಟೆಂಬರ್ 23, 2022 ರಂದು ಲಕ್ನೋದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಗ್ಯಾಂಗ್ ಸ್ಟರ್ ಕಾಯ್ದೆ ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ.ಗಳ ದಂಡ ವಿಧಿಸಿತ್ತು.
1996 ಮತ್ತು 2007 ರಲ್ಲಿ ದಾಖಲಾದ ಗ್ಯಾಂಗ್ ಸ್ಟರ್ ಕಾಯ್ದೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಜಿಪುರ ಜನಪ್ರತಿನಿಧಿಗಳ ನ್ಯಾಯಾಲಯವು 2022 ರ ಡಿಸೆಂಬರ್ 15 ರಂದು ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 5 ಲಕ್ಷ ರೂ. ದಂಡ ವಿಧಿಸಿತ್ತು. 2003 ರಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್ಗೆ ಬೆದರಿಕೆ ಹಾಕಿದ ಆರೋಪದ ಮೇಲೆ 2022 ರ ಸೆಪ್ಟೆಂಬರ್ 21 ರಂದು ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅನ್ಸಾರಿಯನ್ನು ಪಂಜಾಬ್ ನ ರೋಪರ್ ಜೈಲಿನಿಂದ ರಾಜ್ಯಕ್ಕೆ ಕರೆತರಲು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆಗ ಬಿಎಸ್ಪಿ ಶಾಸಕರಾಗಿದ್ದ ಅನ್ಸಾರಿ ಅವರನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019 ರ ಜನವರಿಯಲ್ಲಿ ರೋಪರ್ ಜೈಲಿನಲ್ಲಿ ಇರಿಸಲಾಗಿತ್ತು.
ಮಾರ್ಚ್ 2021 ರಲ್ಲಿ ಯುಪಿ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅನ್ಸಾರಿ ಅವರ ಕಸ್ಟಡಿಯನ್ನು ಯುಪಿಗೆ ಹಸ್ತಾಂತರಿಸುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ದೇಶದ ಕಾನೂನನ್ನು ಉಲ್ಲಂಘಿಸುವ ಅಪರಾಧಿ ಅಥವಾ ವಿಚಾರಣಾಧೀನ ಕೈದಿಯನ್ನು ಒಂದು ಜೈಲಿನಿಂದ ಇನ್ನೊಂದಕ್ಕೆ ವರ್ಗಾಯಿಸುವುದನ್ನು ವಿರೋಧಿಸಲು ಸಾಧ್ಯವಿಲ್ಲ ಮತ್ತು ಕಾನೂನಿನ ನಿಯಮವನ್ನು ನಿರ್ಭೀತಿಯಿಂದ ಪ್ರಶ್ನಿಸುವಾಗ ನ್ಯಾಯಾಲಯಗಳು ಅಸಹಾಯಕ ಪ್ರೇಕ್ಷಕರಾಗಬಾರದು ಎಂದು ನ್ಯಾಯಾಲಯ ಹೇಳಿತ್ತು.
2020 ರಿಂದ ಪೊಲೀಸರು ಅನ್ಸಾರಿ ಗ್ಯಾಂಗ್ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ಯಾಂಗ್ಗೆ ಸೇರಿದ 608 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಅಥವಾ ನೆಲಸಮಗೊಳಿಸಲಾಗಿದೆ. ಈ ಅವಧಿಯಲ್ಲಿ ಗ್ಯಾಂಗ್ನ 215 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಕ್ರಮ ವ್ಯವಹಾರಗಳು, ಒಪ್ಪಂದಗಳು ಅಥವಾ ಟೆಂಡರ್ಗಳನ್ನು ಸಹ ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ : 'ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲಿ ಸ್ಲೋ ಪಾಯಿಸನಿಂಗ್': ಪುತ್ರನಿಂದ ಗಂಭೀರ ಆರೋಪ