ಹೈದರಾಬಾದ್: ತಾಯಿಯೊಬ್ಬಳ ಅಚಲ ನಿರ್ಧಾರ ಮಕ್ಕಳ ಭವಿಷ್ಯವನ್ನು ಮಾತ್ರವಲ್ಲದೇ, ಇಡೀ ಗ್ರಾಮದ ಭವಿಷ್ಯವನ್ನೇ ಬದಲಾಯಿಸಿದೆ. ಇಡೀ ಗ್ರಾಮವೇ ಸಾರಾಯಿ ಚಟದಲ್ಲಿ ಬಿದ್ದಾಗ ಆ ತಾಯಿ ಮಾತ್ರ ತನ್ನ ಮಕ್ಕಳು ಈ ಚಟಕ್ಕೆ ಬಲಿಯಾಗದೇ ಉತ್ತಮ ನಾಗರೀಕರಾಗಬೇಕು ಎಂದು ದೃಢ ಸಂಕಲ್ಪ ಮಾಡಿದ್ದರು. ಅಷ್ಟೇ ಅಲ್ಲ ಅದನ್ನು ಸಾಧಿಸಿ ತೋರಿದ್ದರು. ಆ ತಾಯಿಯ ಹೋರಾಟ ಗ್ರಾಮದ ಇತರ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದು, ಇದರ ಪರಿಣಾಮ ಇದೀಗ ಸಂಪೂರ್ಣ ಗ್ರಾಮದ ಚಿತ್ರಣ ಬದಲಾಗಿದ್ದು, ಇರುವ 140 ಕುಟುಂಬಗಳಲ್ಲಿ ಇದೀಗ 50ಕ್ಕೂ ಹೆಚ್ಚು ಮಂದಿ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ.
ರಾಜುಬಾಯಿ ಈ ಗಟ್ಟಿಗಿತ್ತಿ: ಮಂಚೇರಿಯಲ್ ಜಿಲ್ಲೆಯ ಕಾಸಿಪೇಟ ಮಂಡಲದ ಲಂಬಾಡಿ ತಾಂಡಾ (ಕೆ) ಹಿಂದೊಮ್ಮೆ ಕಳ್ಳಭಟ್ಟಿ ಸೇವನೆಗೆ ಹೆಸರಾಗಿತ್ತು. ಆದರೆ, ರಾಜುಬಾಯಿಯ ಆ ಒಂದು ನಿರ್ಧಾರ ಇಡೀ ಗ್ರಾಮವನ್ನೇ ರೂಪಾಂತರಗೊಳಿಸಿದೆ. ಹಿಂದೆ ತಾಂಡಾದಲ್ಲಿದ್ದ ಬಹುತೇಕ ಪುರುಷರು ಕುಡಿತದ ಚಟಕ್ಕೆ ಬಲಿಯಾಗಿದ್ದರು. ಇದರಿಂದ ಅನೇಕ ಕುಟುಂಬಗಳು ಮತ್ತು ಜನರ ಜೀವನವೂ ಹಾಳಾಗಿತ್ತು. ಇದನ್ನೆಲ್ಲಾ ಕಂಡ ರಾಜು ಬಾಯಿ, ತನ್ನ ಮಕ್ಕಳ ಜೀವನ ಹಾಳಾಗಬಾರದು ಎಂದು ನಿರ್ಧರಿಸಿದರು. ಇದಕ್ಕಾಗಿ ಆಯ್ಕೆ ಮಾಡಿದ ಮಾರ್ಗ ಶಿಕ್ಷಣ, ಶಿಕ್ಷಣದಿಂದ ಮಾತ್ರವೇ ಮಕ್ಕಳ ಭವಿಷ್ಯ ಉಜ್ವಲವಾಗಿಸಲು ಸಾಧ್ಯ ಎಂದು ನಂಬಿದರು. ಅನೇಕ ಆರ್ಥಿಕ ಕಷ್ಟ, ಸಮುದಾಯದ ಕುಡಿತದ ಚಟ, ಬಡತನವನ್ನು ಮೆಟ್ಟಿ ನಿಂತರು ರಾಜುಬಾಯಿ. ಆಕೆಯ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಪರಿಣಾಮ ಆಕೆಯ ಎರಡನೇ ಮಗ ನರಸಿಂಹ 2001ರಲ್ಲಿ ಎಸ್ಜಿಟಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ. ದೊಡ್ಡ ಮಗ ಲಕ್ಷಣ ಗುತ್ತಿಗೆ ಆಧಾರದ ಕೆಲಸಕ್ಕೆ ನೇಮಕಗೊಂಡ, ಮತ್ತೊಬ್ಬ ಮಗ ಡಿಎಸ್ಸಿಗೆ ಸಿದ್ದತೆ ನಡೆಸುತ್ತಿದ್ದರೆ, ಮಗಳು ರಾಜೇಶ್ವರಿ ಕೂಡ ಶಿಕ್ಷಕಿಯಾಗಿದ್ದಾರೆ.
ಗ್ರಾಮದ ಅನೇಕ ಮಹಿಳೆಯರಿಗೆ ಸ್ಪೂರ್ತಿ: ರಾಜುಬಾಯಿಯ ಈ ಯಶೋಗಾಥೆ ಗ್ರಾಮದ ಅನೇಕ ಮಹಿಳೆಯರಿಗೆ ಉದಾಹರಣೆ ಮೈಲಿಗಲ್ಲು ಆಯಿತು. ಆಕೆಯನ್ನೇ ಸ್ಪೂರ್ತಿಯಾಗಿ ಪಡೆದ ಅನೇಕ ಕುಟುಂಬಗಳು ಶಿಕ್ಷಣವನ್ನು ಅಪ್ಪಿಕೊಂಡು, ಕೆಳ ಸ್ತರದಿಂದ ಮೇಲೇಳುವ ಪ್ರಯತ್ನ ನಡೆಸಿದರು. ಇದೀಗ ಗ್ರಾಮದಲ್ಲಿರುವ 140 ಕುಟುಂಬದಲ್ಲಿ 50 ಮಂದಿ ಸರ್ಕಾರಿ ಉದ್ಯೋಗ ಹೊಂದಿದ್ದು, ಗ್ರಾಮ ಸರ್ಕಾರಿ ಉದ್ಯೋಗದ ಭೂಮಿ ಎಂದೇ ಹೆಸರು ಪಡೆದಿದೆ. ಕಳೆದ ವರ್ಷ ಗ್ರಾಮದ 14ರಲ್ಲಿ 10 ಯುವಕರು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಪಾಸ್ ಮಾಡಿ ಉದ್ಯೋಗ ಪಡೆದಿದ್ದಾರೆ. ಶಿಕ್ಷಕರು, ಅರಣ್ಯ, ಪೊಲೀಸ್, ಕಂದಾಯ, ವಿಜ್ಞಾನ ಸಂಶೋಧನೆ, ವೈದ್ಯಕೀಯ, ಬ್ಯಾಂಕಿಂಗ್ ಹೀಗೆ ಹಲವು ವಲಯದಲ್ಲಿ ಇಲ್ಲಿನ ಗ್ರಾಮಸ್ಥರು ಉದ್ಯೋಗ ಪಡೆದಿದ್ದಾರೆ.
ಹಿಂದೆ ಗ್ರಾಮಕ್ಕೆ ಪಿಡುಗು ಆಗಿದ್ದ ಸಾರಾಯಿ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಶಿಕ್ಷಣ ಹೇಗೆ ಬದುಕು ಮತ್ತು ಸಮುದಾಯವನ್ನು ಬದಲಾಯಿಸಬಹುದು ಎಂಬುದಕ್ಕೆ ಗ್ರಾಮ ಉದಾಹರಣೆಯಾಗಿದೆ.
ಗ್ರಾಮದ ಜನರ ಸ್ಪೂರ್ತಿಯ ಕಥೆಗಳು
ಒಂದೇ ಕುಟುಂಬದಲ್ಲಿ ಐದು ಸರ್ಕಾರಿ ಉದ್ಯೋಗಿಗಳು: ನನಗೆ ಆರು ಜನ ಮಕ್ಕಳು, ನನ್ನ ಗಂಡನ ಸಾವಿನ ಬಳಿಕ ಅವರನ್ನು ಸಲಹುವುದು ಸವಾಲಾಗಿತ್ತು. ಆದರೆ, ನಮ್ಮ ಸಮಸ್ಯೆ ಪರಿಹಾರ ಸಿಗುವುದು ಶಿಕ್ಷಣದಿಂದ ಮಾತ್ರ ಎಂದು ನಂಬಿದೆ. ಇಂದು ನನ್ನ ಐದು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಮೊದಲ ಮಗ ಮೋಹನ್ ಜೈಪುರ್ನ ಸಿಂಗರೆನಿ ಪವರ್ ಸ್ಟೇಷನ್ನಲ್ಲಿ ಜೂನಿಯರ್ ಕೆಮಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಮುರಳಿ, ಚಂತಿ ಮತ್ತು ಕಿರಣ್ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ. ಮತ್ತೊಬ್ಬ ಮಗ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಕಡೇಯ ಮಗ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾನೆ. ಈ ಹಿಂದೆ ನಮ್ಮ ಕುಟುಂಬವನ್ನು ಕಡೆಗಣಿಸುತ್ತಿದ್ದವರು ಇದೀಗ ಸ್ಪೂರ್ತಿಯಾಗಿ ನೋಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅಜ್ಮೀರ ಲಕ್ಷ್ಮೀ.
ಪಂಚಾಯತ್ ಕಾರ್ಯಕರ್ತನಿಂದ ಕಾನ್ಸ್ಟೇಬಲ್; ಬಡ ಕುಟುಂಬದಿಂದ ಬಂದ ನಾನು ಆ ದಿನದ ದುಡಿಮೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು. ಪಂಚಾಯತ್ನಲ್ಲಿ ನಾನು ಕಸ ಆಯುತ್ತಿದ್ದೆ. ಈ ಎಲ್ಲಾ ಕಷ್ಟಗಳ ಹೊರತಾಗಿ ನಾನು ಕಾನ್ಸ್ಟೇಬಲ್ ಕೆಲಸಕ್ಕೆ ಸಿದ್ಧತೆ ನಡೆಸುತ್ತಿದ್ದೆ. ಕಳೆದ ವರ್ಷ ನನ್ನ ಕಾನ್ಸ್ಟೇಬಲ್ ಪರೀಕ್ಷೆಯ ಫಲಿತಾಂಶ ಹೊರ ಬಿದ್ದ ಬಳಿಕ ಕುಟುಂಬದ ಜೀವನವೇ ಬದಲಾಗಿದೆ ಎನ್ನುತ್ತಾರೆ ಕೆಲೊತ್ ಅನಿಲ್ ಕುಮಾರ್.
ಆರು ತಿಂಗಳ ಕಂದನ ಜೊತೆ ಕಾನ್ಸ್ಟೇಬಲ್ ಹುದ್ದೆಗೆ ಸಿದ್ಧತೆ: ಲಂಬಾಡಿ ತಾಂಡಾ (ಕೆ) ದಲ್ಲಿ ನಾನು ಜನಿಸಿದೆ. ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಕಂಡೆ. ಮದುವೆಯಾಗಿ ಆರು ತಿಂಗಳ ಕೂಸಿರುವಾಗ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಹೊರಬಿತ್ತು. ಮಗುವಿನ ಆರೈಕೆ ನಡುವೆಯೇ ವೃತ್ತಿಗೆ ತಯಾರಿ ನಡೆಸಿದೆ. ಇದೀಗ ಸಿಬಿಲ್ ಕಾನ್ಸ್ಟೇಬಲ್ ಉದ್ಯೋಗ ಸಿಕ್ಕಿದೆ. ನನ್ನ ಸಹೋದರ ಕೂಡ ಕಾನ್ಸ್ಟೇಬಲ್ ಉದ್ಯೋಗ ಪಡೆದಿದ್ದು, ಇದು ಕುಟುಂಬಕ್ಕೆ ಗರ್ವದ ವಿಚಾರವಾಗಿದೆ ಎನ್ನುತ್ತಾರೆ ಕುನ್ಸೋತ್ ಸರೋಜಾ.
ಶಿಕ್ಷಣದ ಶಕ್ತಿ ಜೊತೆಗೆ ಮಕ್ಕಳ ಮತ್ತು ಸಮುದಾಯದ ಭವಿಷ್ಯಕ್ಕೆ ತಾಯಿ ತೊಟ್ಟ ಪ್ರತಿಜ್ಞೆ ಇಂದು ಲಂಬಾಡಿ ತಾಂಡಾ (ಕೆ) ಗ್ರಾಮ ಸಂಪೂರ್ಣವಾಗಿ ಬದಲಾಗಿದೆ. ದೇಶದ ಮಾದರಿ ಗ್ರಾಮವಾಗಿ ರೂಪುಗೊಂಡಿದೆ.
ಇದನ್ನೂ ಓದಿ: ಬಡತನದಲ್ಲಿ ಅರಳಿದ ಯುವ ಪ್ರತಿಭೆ: ಪ್ರತಿಷ್ಠಿತ ಕಂಪನಿಯಲ್ಲಿ ₹ 52 ಲಕ್ಷ ಪ್ಯಾಕೇಜ್, ರೈತನ ಮಗಳ ಯಶೋಗಾಥೆ