ಗುರುಗ್ರಾಮ(ಹರಿಯಾಣ): ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗುರುಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಲ್ಲಿನ ಸೆಕ್ಟರ್ 18 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ತನ್ನ ಎಂಟು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿದ್ದಾಳೆ.
ಶಾಲೆಯಿಂದ ಮನೆಗೆ ಹಿಂತಿರುಗಿದ ವೇಳೆ ಬಾಲಕ ತನ್ನ ಬಟ್ಟೆಯಲ್ಲಿ ಕೊಳೆ ಮಾಡಿಕೊಂಡಿದ್ದ. ಇದರ ಜೊತೆಗೆ ಕೆಲವು ಪುಸ್ತಕಗಳನ್ನು ಶಾಲೆಯಲ್ಲೇ ಮರೆತು ಬಂದಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಮಗುವನ್ನು ಅಮಾನುಷವಾಗಿ ಥಳಿಸಿದ್ದಾಳೆ. ಮನೆಯೊಳಗೆ ಬರಲು ಬಿಡದೆ ಹೊರಗೆ ನಿಲ್ಲಿಸಿದ್ದಾಳೆ. ಸ್ವಲ್ಪ ಸಮಯದ ನಂತರ, ಬಟ್ಟೆಯಲ್ಲೇಕೆ ಕೊಳೆ ಮಾಡಿಕೊಂಡೆ?, ಪುಸ್ತಕಗಳನ್ನೇಕೆ ಮರೆತು ಬಂದೆ? ಎಂದು ಗದರಿಸಿದ್ದಾಳೆ. ಆ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಸಂಜೆ ಮನೆಗೆ ಬಂದಾಗ ಪುತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ನೋಡಿದ್ದಾರೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸೆಕ್ಟರ್-18 ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ತನ್ನ ಮಗನನ್ನು ಕೊಂದಿರುವ ಬಗ್ಗೆ ಮಹಿಳೆಯಲ್ಲಿ ಕಿಂಚಿತ್ತೂ ಪಶ್ಚಾತ್ತಾಪ ಕಾಣುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುಗ್ರಾಮ್ ಎಸಿಪಿ ಹೇಳಿಕೆ: ಗುರುಗ್ರಾಮ್ ಎಸಿಪಿ ವರುಣ್ ದಹಿಯಾ ಮಾತನಾಡಿ, ''ಮಹಿಳೆ ಮತ್ತು ಆಕೆಯ ಪತಿ ಮತ್ತು ಪುತ್ರ ಕಾರ್ತಿಕ್ ಸೆಕ್ಟರ್-18 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಪತಿ ಅರವಿಂದ್ ಕೂಲಿ ಕೆಲಸ ಮಾಡುತ್ತಿದ್ದಾರೆ. ಮೇ 13ರ ಮಧ್ಯಾಹ್ನ ಮಹಿಳೆ ಈ ಕೃತ್ಯ ಎಸಗಿದ್ದಾಳೆ" ಎಂದು ತಿಳಿಸಿದರು.
ಇದನ್ನೂ ಓದಿ: ಮುಂಬೈ: ಅಕ್ರಮ ಜಾಹೀರಾತು ಫಲಕ ಬಿದ್ದು 16 ಜನ ಸಾವು ಪ್ರಕರಣ, ಆರೋಪಿ ಸೆರೆ - Mumbai Hoarding Collapse