ಭುವನೇಶ್ವರ್(ಒಡಿಶಾ): ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಮೋಹನ್ ಚರಣ್ ಮಾಝಿ, ಉಪಮುಖ್ಯಮಂತ್ರಿಗಳಾಗಿ ಕೆ.ವಿ.ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಆಯ್ಕೆಯಾಗಿದ್ದಾರೆ. ಜೂನ್ 12ರಂದು ಪ್ರಧಾನಿ ಮೋದಿ ಸಮ್ಮುಖದಲ್ಲಿ ನೂತನ ಸಿಎಂ, ಡಿಸಿಎಂಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 147 ಕ್ಷೇತ್ರಗಳ ಪೈಕಿ ಬಿಜೆಪಿ 78 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದಿದೆ. ಆಡಳಿತಾರೂಢ ಬಿಜೆಡಿ 51 ಸ್ಥಾನಗಳಿಗೆ ಸೀಮಿತವಾಗಿದೆ. ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದರೆ, ಸಿಪಿಐ(ಎಂ) ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದೆ.
ಸರ್ಕಾರ ರಚನೆ ಹಾಗೂ ಸಿಎಂ ಆಯ್ಕೆಗಾಗಿ ಕೇಂದ್ರದ ವೀಕ್ಷಕರಾಗಿ ದೆಹಲಿಯಿಂದ ಹಿರಿಯ ನಾಯಕರು, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಭುಪೇಂದ್ರರ್ ಯಾದವ್ ರಾಜ್ಯಕ್ಕೆ ಆಗಮಿಸಿದ್ದರು. ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ನಾಲ್ಕು ಬಾರಿಯ ಶಾಸಕರಾದ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮೊದಲ ಬಿಜೆಪಿ ಸಿಎಂ ಆಗಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ನಾಳೆ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ