ಜೈಪುರ: ಅಸ್ಪೃಶ್ಯತೆಯನ್ನು ನಾವು ಸಂಪೂರ್ಣವಾಗಿ ತೊಡೆದುಹಾಕಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ರಾಜಸ್ಥಾನದ ಆಳ್ವಾರ್ನಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ನಾವು ನಮ್ಮ ಧರ್ಮವನ್ನು ಮರೆತು ಸ್ವಾರ್ಥಕ್ಕೊಳಗಾದ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಶುರುವಾಯಿತು. ಮೇಲು-ಕೀಳೆಂಬ ಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲೇಬೇಕಿದೆ. ಸಾಮಾಜಿಕ ಸಾಮರಸ್ಯದ ಮೂಲಕ ಈ ಬದಲಾವಣೆ ತರಬೇಕು" ಎಂದು ಕರೆ ಕೊಟ್ಟರು.
"ಸಾಮಾಜಿಕ ಸಾಮರಸ್ಯ, ಪರಿಸರ, ಕೌಟುಂಬಿಕ ಮೌಲ್ಯಗಳು, ಸ್ವದೇಶಿ ಮತ್ತು ನಾಗರಿಕ ಕರ್ತವ್ಯ ಎಂಬ 5 ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸ್ವಯಂಸೇವಕರಿಗೆ ಭಾಗವತ್ ತಿಳಿಸಿದರು. ಸ್ವಯಂಸೇವಕರು ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ಅವರನ್ನು ಅನುಸರಿಸುತ್ತದೆ" ಎಂದರು.
"ಮುಂದಿನ ವರ್ಷ ಸಂಘ 100ನೇ ವರ್ಷಕ್ಕೆ ಕಾಲಿಡಲಿದೆ. ಸಂಘದ ಸಾಮಾಜಿಕ ಕೆಲಸ ಕಾರ್ಯಗಳು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾವು ಕೆಲಸ ಮಾಡುವಾಗ, ಅದರ ಹಿಂದಿನ ಆಲೋಚನೆ ಏನೆಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶವನ್ನು ಶಕ್ತಿಯುತವಾಗಿ ಕಟ್ಟಬೇಕು. ನಮ್ಮ ಪ್ರಾರ್ಥನೆಗಳು ಹಿಂದೂ ರಾಷ್ಟ್ರಕ್ಕಾಗಿ. ಹಿಂದೂ ಸಮಾಜ ಇದರ ಹಿಂದಿನ ಕಾರಣ. ದೇಶಕ್ಕೆ ಒಳ್ಳೆಯದಾದರೆ ಅದು ಹಿಂದೂ ಸಮಾಜದ ಕೀರ್ತಿಗೆ ಕಾರಣವಾಗುತ್ತದೆ. ಏನಾದರೂ ತಪ್ಪಾದಲ್ಲಿ ಅದರ ಅಪವಾದ ಹಿಂದೂ ಸಮಾಜದ ಮೇಲೆ ಬೀಳುತ್ತದೆ. ಈ ಗುರಿ ಸಾಧಿಸಲು ನಾವು ಸಮರ್ಥರಾಗಿ, ಸಮಾಜವನ್ನು ಸಮರ್ಥವಾಗಿಸಬೇಕು" ಎಂದು ಹೇಳಿದರು.
"ಹಿಂದೂ ಎಂದರೆ ಜಗತ್ತಿನಲ್ಲಿಯೇ ಉದಾರವಾದ ಮಾನವ. ಎಲ್ಲವನ್ನೂ ಒಪ್ಪಿಕೊಳ್ಳುವವ. ಪ್ರತಿಯೊಬ್ಬರಿಗೂ ಒಳಿತಾಗಲಿ ಎಂಬ ಭಾವನೆ ಹೊಂದಿರುವವ. ಯಾರೂ ಶಿಕ್ಷಣವನ್ನು ವಿವಾದ ಮಾಡಲು ಬಳಸುವುದಿಲ್ಲ. ಜ್ಞಾನವನ್ನು ದಾನಕ್ಕಾಗಿ, ದುರ್ಬಲರನ್ನು ರಕ್ಷಿಸುವ ಶಕ್ತಿಯನ್ನಾಗಿ ಬಳಸಿ. ಭಾಷೆ, ಜಾತಿ, ಪ್ರದೇಶ ಅಥವಾ ಪದ್ಧತಿಗಳನ್ನು ಲೆಕ್ಕಿಸದ ಗುಣವನ್ನು ಹಿಂದು ಹೊಂದಿದ್ದಾನೆ. ಈ ಮೌಲ್ಯಗಳನ್ನು ಹೊಂದಿರುವ ಮತ್ತು ಈ ಸಂಸ್ಕೃತಿಯನ್ನು ಅನುಸರಿಸುವರು ಯಾರಾದರೂ ಹಿಂದೂಗಳೇ" ಎಂದರು.
"ಈ ಮೊದಲು ಯಾರಿಗೂ ಕೂಡ ಸಂಘ ಏನೆಂಬುದು ತಿಳಿದಿರಲಿಲ್ಲ. ಆದರೆ, ಇದೀಗ ಪ್ರತಿಯೊಬ್ಬರಿಗೂ ತಿಳಿದಿದೆ. ಸಂಘದಲ್ಲಿ ಯಾರಿಗೂ ನಂಬಿಕೆ ಇರಲಿಲ್ಲ. ಇಂದು ಎಲ್ಲರೂ ನಂಬುತ್ತಾರೆ, ನಮ್ಮನ್ನು ವಿರೋಧಿಸುವವರೂ ನಂಬುತ್ತಾರೆ. ನಾವು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಮಾಜವನ್ನು ರಕ್ಷಿಸಬೇಕು" ಎಂದು ಮೋಹನ್ ಭಾಗವತ್ ಹೇಳಿದರು.(ಐಎಎನ್ಎಸ್)
ಇದನ್ನೂ ಓದಿ: ಎಂಜಿನಿಯರ್ ರಶೀದ್, ಜಮಾತೆ ಇಸ್ಲಾಮಿ ಇಬ್ಬರೂ ಆರೆಸ್ಸೆಸ್ನ ಮಿತ್ರರು: ಫಾರೂಕ್ ಅಬ್ದುಲ್ಲಾ ಆರೋಪ