ಮುಂಬೈ, ಮಹಾರಾಷ್ಟ್ರ: ಮುಂಬೈ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಗುಡುಗು ಮಿಂಚಿನಿಂದ ವರುಣಾರ್ಭಟ ಹೆಚ್ಚಿದು, ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಭಾರೀ ಮಳೆಗೆ ತಂದೆ - ಮಗ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೂಡ ವರದಿಯಾಗಿದೆ. ತಂದೆ ಮಗನ ಮೇಲೆ ಸ್ಲ್ಯಾಬ್ (ಸಜ್ಜಾ) ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಮುಂಬೈನ ವಿಕ್ರೋಲಿ ಪಾರ್ಕ್ ಪ್ರದೇಶದ ಸಮೀಪದಲ್ಲಿ ಮೃತ ಪಟ್ಟ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಜೆ ಸುಮಾರಿಗೆ ತಂದೆಗೆ 10 ವರ್ಷದ ಬಾಲಕ ಊಟದ ಡಬ್ಬಿಯನ್ನು ಕೊಡಲು ಆಗಮಿಸಿದ್ದಾನೆ. ಈ ವೇಳೆ ತಂದೆಯೊಂದಿಗೆ ಮಾತನಾಡುತ್ತಿದ್ದಾಗ ಇಬ್ಬರ ಮೇಲೆ ಕಟ್ಟಡದ ಸ್ಲ್ಯಾಬ್ ಕುಸಿದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸಾವನ್ನಪ್ಪಿದ ತಂದೆ 38 ವರ್ಷವಾಗಿದ್ದು, ಮಗನಿಗೆ 10 ವರ್ಷವಾಗಿದೆ. ಹೊಸ ಕಟ್ಟದಿಂದ ಈ ಚಪ್ಪಡಿ ಕಲ್ಲು ಬಿದ್ದಿದೆ. ಈ ಹಿನ್ನಲೆ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಟಾಟಾ ಪವರ್ ಹೌಸ್, ಕೈಲಾಸ್ ಬ್ಯುಸಿನೆಸ್ ಪಾರ್ಕ್ ಬಳಿಯ ವಿಕ್ರೋಲಿ ಪಶ್ಚಿಮದ ಪಾರ್ಕ್ ಸೈಟ್‌ನಲ್ಲಿರುವ ಹೊಸ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡದಿಂದ ಸ್ಲ್ಯಾಬ್ ಕುಸಿದಿದ್ದು ಹೇಗೆ? ಇಲ್ಲಿ ಕಳಪೆ ಕಾಮಗಾರಿ ನಡೆದಿದೆಯೇ? ಎಂಬ ಹಲವು ಪ್ರಶ್ನೆಗಳು ಇದೀಗ ಮೂಡಿದೆ. ಅಲ್ಲದೇ ಇಬ್ಬರ ಸಾವಿಗೆ ಇದೀಗ ಯಾರ ಹೊಣೆ ಎಂಬ ಪ್ರಶ್ನೆ ಕೂಡ ಸ್ಥಳೀಯರಿಂದ ವ್ಯಕ್ತವಾಗಿದೆ.
ಕಳೆದ ತಿಂಗಳು ಕೂಡ ಅಂದರೆ ಮೇ 30ರಂದು ಇದೇ ವಿಕ್ರೋಲಿಯಲ್ಲಿನ ಕನ್ನಮ್ವರ್ ನಗರದಲ್ಲಿ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಇಬ್ಬರು ಹಿರಿಯರು ಸಾವನ್ನಪ್ಪಿದ್ದರು. ಕನ್ನಮ್ವರ್ ನಗರದ ವಿಕ್ರೋಲಿಯಲ್ಲಿನ ಗುರು ಕೃಪ ಸಿಚ್ಎಸ್ ಕಟ್ಟದಲ್ಲಿ ಈ ಘಟನೆ ನಡೆದಿತ್ತು. ಕಟ್ಟಡದ ಎರಡನೇ ಫ್ಲೋರ್ ಸ್ಲ್ಯಾಬ್ ಕುಸಿದಿತು. ಪರಿಣಾಮ ಅದರ ಭಾರಕ್ಕೆ ಮೊದಲ ಫ್ಲೋರ್ ತಾರಸಿ ಕುಸಿದು, ಗ್ರೌಂಡ್ಫ್ಲೋರ್ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರು.