ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಮಾತ್-ಎ-ಇಸ್ಲಾಮಿ (ಜೆಇಐ) ಇಚ್ಛೆ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದ್ದು, ಕೇಂದ್ರ ಸರ್ಕಾರವು ಅದರ ಮೇಲಿನ ನಿಷೇಧವನ್ನು ಹಿಂಪಡೆಯಬೇಕೆಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಭಾನುವಾರ ಆಗ್ರಹಿಸಿದೆ.
ಈ ಕುರಿತು ಶ್ರೀನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, "ಇದೊಂದು ಒಳ್ಳೆಯ ಬೆಳವಣಿಗೆ. ಕೇಂದ್ರ ಸರ್ಕಾರವು ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ಹಿಂಪಡೆಯಲಿ. ಈ ದೇಶದಲ್ಲಿ ಕೋಮು ದಳ್ಳುರಿ ಹರಡುತ್ತಿರುವ ಸಂಘಟನೆಗಳ ಮೇಲೆ ನೀವು ಯಾವುದೇ ನಿಷೇಧ ಹೇರುತ್ತಿಲ್ಲ. ನಾನು ಇಲ್ಲಿ ಯಾವುದೇ ಸಂಘಟನೆಯ ಹೆಸರು ಹೇಳಲು ಬಯಸಲ್ಲ. ಮಸೀದಿಗಳ ಮೇಲೆ ಕಲ್ಲು ತೂರಾಟ ಮಾಡುವ, ಮುಸಲ್ಮಾನರನ್ನು ಹತ್ಯೆಗೈಯುವ ಅಂಥ ಸಂಘಟನೆಗಳನ್ನು ನೀವು ನಿಷೇಧ ಮಾಡುತ್ತಿಲ್ಲ ಎಂದಾದರೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ, 2014ರ ಪ್ರವಾಹದ ಸಮಯದಲ್ಲಿ ಮತ್ತು ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ಜಮಾತ್-ಎ-ಇಸ್ಲಾಮಿ ಮೇಲೆ ನಿಷೇಧ ಹೇರುವುದು ಏಕೆ?" ಎಂದು ಪ್ರಶ್ನಿಸಿದರು.
"ನಾವು ಬಹುತೇಕ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಕಾಂಗ್ರೆಸ್ ಮತ್ತು ಎನ್ಸಿ ಇನ್ನೂ ಘೋಷಿಸಿಲ್ಲ" ಎಂದು ಅವರು ನುಡಿದರು.
ಕೆಲ ಮಾಧ್ಯಮ ವರದಿಗಳ ಪ್ರಕಾರ, ಜೆಇಐನ ಕೆಲ ಮಾಜಿ ನಾಯಕರು ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಜೆಇಐ ಪರವಾಗಿ ಮಾತನಾಡಿದ್ದಾರೆ.
370 ನೇ ವಿಧಿಯ ವಿಷಯದ ಬಗ್ಗೆ ಮಾತನಾಡಿದ ಮುಫ್ತಿ, "ಜಮ್ಮು ಮತ್ತು ಕಾಶ್ಮೀರದ ಜನತೆ ಘನತೆಯಿಂದ ಬದುಕುವ, ತಲೆ ಎತ್ತಿ ನಿಲ್ಲುವ ರೀತಿಯಲ್ಲಿ ಚುನಾವಣಾ ಫಲಿತಾಂಶಗಳು ಬರಬೇಕು ಎಂಬುದು ಪಿಡಿಪಿಯ ಸ್ಪಷ್ಟ ಕಾರ್ಯಸೂಚಿಯಾಗಿದೆ. 370 ನೇ ವಿಧಿಯನ್ನು ರದ್ದುಪಡಿಸಿದ್ದರಿಂದ ಸಮಸ್ಯೆಯು ಮತ್ತಷ್ಟು ಜಟಿಲವಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯ ಪರಿಹಾರದ ಚರ್ಚೆ ನಡೆದಾಗಲೆಲ್ಲ, 370 ನೇ ವಿಧಿಯ ಪುನಃಸ್ಥಾಪನೆಯ ವಿಷಯದಿಂದಲೇ ಆ ಚರ್ಚೆಗಳು ಆರಂಭವಾಗಬೇಕು" ಎಂದು ಹೇಳಿದರು.
ಜೈಲಿನಲ್ಲಿರುವ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಉತ್ತರ ಕಾಶ್ಮೀರದ ಜನರು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕೆಂಬ ಭಾವನೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಮುಫ್ತಿ ಪ್ರತಿಪಾದಿಸಿದರು. ಉತ್ತರ ಕಾಶ್ಮೀರದ ಕುಪ್ವಾರಾದ ಲಂಗಟೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ರಶೀದ್, ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಸುವುದರ ಪರವಾಗಿದ್ದಾರೆ.
ಇದನ್ನೂ ಓದಿ: ಬಿಹಾರದ ಎಲ್ಲ 243 ಕ್ಷೇತ್ರಗಳಲ್ಲಿ ಜನ್ ಸುರಾಜ್ ಸ್ಪರ್ಧೆ: ಸಂಸ್ಥಾಪಕ ಪ್ರಶಾಂತ್ ಕಿಶೋರ್ ಘೋಷಣೆ - Prashant Kishor