ನವದೆಹಲಿ: ಮೀಸಲಾತಿ ಹಿಂಸಾಚಾರಪೀಡಿತ ಬಾಂಗ್ಲಾದೇಶದಿಂದ ಸುಮಾರು 1,000ಕ್ಕೂ ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಸಾರಿಗೆ ಹಾಗು ವಿಮಾನಗಳ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ. ಬಾಂಗ್ಲಾ ಮೀಸಲಾತಿ ಹೋರಾಟದಲ್ಲಿ ಈವರೆಗೆ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಬಾಂಗ್ಲಾದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಮ್ಮ ಇಲಾಖೆ ವಿಶೇಷ ಗಮನಹರಿಸಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಇದುವರೆಗೆ 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಬಂದರುಗಳ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳ ಮೂಲಕ ಮನೆಗೆ ಮರಳಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ವಿವಾದಾತ್ಮಕ ಉದ್ಯೋಗ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವಾರಗಳ ಹಿಂದೆ ಪ್ರಾರಂಭವಾದ ಈ ಘರ್ಷಣೆಯಲ್ಲಿ ಇದುವರೆಗೆ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೀಗ ಕಾನೂನು ಜಾರಿ ಅಧಿಕಾರಿಗಳು ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದ್ದಾರೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಶುಕ್ರವಾರ ಮಾತನಾಡಿ, ಬಾಂಗ್ಲಾದಲ್ಲಿರುವ ಅಂದಾಜು 15,000 ಭಾರತೀಯ ಪ್ರಜೆಗಳಿದ್ದಾರೆ. ಢಾಕಾದಲ್ಲಿರುವ ಹೈಕಮಿಷನ್ ಹಾಗು ಚಿತ್ತಗಾಂಗ್, ರಾಜ್‌ಶಾಹಿ, ಸಿಲ್ಹೆಟ್ ಮತ್ತು ಖುಲ್ನಾದಲ್ಲಿನ ಸಹಾಯಕ ಹೈಕಮಿಷನ್‌ಗಳು ಭಾರತೀಯ ಪ್ರಜೆಗಳನ್ನು ಮನೆಗೆ ಹಿಂದಿರುಗಿಸಲು ಸಹಾಯ ಮಾಡುತ್ತಿವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗಡಿ ದಾಟುವ ಸ್ಥಳಗಳಿಗೆ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ನಾಗರಿಕರಿಗೆ ಸುಗಮ ಪ್ರಯಾಣ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ಇಲಾಖೆ ನಾಗರಿಕ ವಿಮಾನಯಾನ ಇಲಾಖೆ, ವಲಸೆ, ಭೂ ಬಂದರುಗಳು ಮತ್ತು ಬಿಎಸ್‌ಎಫ್ ಅಧಿಕಾರಿಗಳೊಂದಿಗೂ ಸಮನ್ವಯ ಸಾಧಿಸುತ್ತಿದೆ. ಇನ್ನು ಕೋರಿಕೆಯ ಮೇರೆಗೆ ನೇಪಾಳ ಮತ್ತು ಭೂತಾನ್ ದೇಶಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.