ಸತಾರಾ, ಗುಜರಾತ್: ಎಂಬಿಬಿಎಸ್ ವಿದ್ಯಾರ್ಥಿಯೊಬ್ಬಳ್ಳನ್ನು ಅವಳ ಸಹಪಾಠಿಯೇ ಮೂರನೇ ಮಹಡಿಯಿಂದ ತಳ್ಳಿ ಸಾಯಿಸಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರದ್ನಲ್ಲಿ ನಡೆದಿದೆ. ಮೇಲಿಂದ ಬಿದ್ದ ಯುವತಿ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ 21 ವರ್ಷದ ಯುವತಿಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿನಿ ಬಿಹಾರ ಮೂಲದವರಾಗಿದ್ದು, ಇಲ್ಲಿನ ಕರಾದ್‌ನ ಕೃಷ್ಣ ವಿಶ್ವ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣದ ಸೋನಿಪತ್‌ನ ಧ್ರುವ್ ಚಿಕ್ಕಾರ ಎಂಬಾತ ಈ ಕೃತ್ಯ ಎಸಗಿರುವ ಆರೋಪಿ ಎಂದು ಗುರುತಿಸಲಾಗಿದೆ. ಜೂನ್ 30 ರಂದು ಕರಾದ್‌ನ ಮಲ್ಕಾಪುರ ಪ್ರದೇಶದ ಸನ್‌ಸಿಟಿ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದೆರಡು ವರ್ಷಗಳಿಂದ ಇಬ್ಬರು ಸಂಬಂಧದಲ್ಲಿದ್ದರು. ಆದರೆ, ಕೆಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಜೂನ್ 30 ರಂದು ಸನ್ಸಿಟಿಯಲ್ಲಿರುವ ಫ್ಲಾಟ್ಗೆ ಬಂದಾಗ ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡು ಯುವತಿಯನ್ನು ಆರೋಪಿ ತಳ್ಳಿದ್ದಾನೆ ಎಂದು ಸತಾರಾದ ಎಸ್ಪಿ ಸಮೀರ್ ಶೇಖ್ ತಿಳಿಸಿದ್ದಾರೆ.
ಮೃತಪಟ್ಟ ಯುವತಿ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಇದು ಕಟ್ಟಡದಿಂದ ಬೀಳುವಾಗ ಆಗುವ ಗಾಯ ಎನ್ನಲಾಗಿದೆ. ಆದರೆ, ಆರೋಪಿ ದ್ರುವ್ ಆಕೆಯ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ಮೃತ ವಿದ್ಯಾರ್ಥಿನಿ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತಳ ತಾಯಿ ಬಿಹಾರದಲ್ಲಿ ವೈದ್ಯೆಯಾಗಿದ್ದು, ತನ್ನ ಮಗಳೊಂದಿಗೆ ದ್ರುವ್ ಜಗಳವಾಡುತ್ತಿದ್ದ. ಇತರ ಯುವಕರೊಂದಿಗೆ ಆಕೆ ಮಾತನಾಡುವುದನ್ನು ವಿರೋಧಿಸುತ್ತಿದ್ದ ಎಂದಿದ್ದಾರೆ.
ಆರೋಪಿಯು ತನ್ನ ಮಗಳಿಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ, ಈ ಬಗ್ಗೆ ಮೃತ ವಿದ್ಯಾರ್ಥಿನಿ ತಾಯಿಗೆ ತಿಳಿಸಿದ್ದಳು. ಆತನಿಂದ ಅಂತರ ಕಾಯ್ದುಕೊಳ್ಳುವಂತೆ ಆಕೆಯ ತಾಯಿ ಅವಳಿಗೆ ಸಲಹೆ ನೀಡಿದ್ದಳು, ಆದರೆ ಅವಳು ಅವನಿಂದ ದೂರವಿರಲು ಪ್ರಯತ್ನಿಸಿದಾಗ ಆತ ಹಿಂಬಾಲಿಸುತ್ತಿದ್ದ. ಇದೀಗ ತಾಯಿಯ ದೂರಿನ ಮೇಲೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಎಲ್ಲ ರೈಲು ಮಾರ್ಗಗಳಲ್ಲಿ 'ಕವಚ' ಸುರಕ್ಷತಾ ವ್ಯವಸ್ಥೆ ಅಳವಡಿಕೆ: ಅಶ್ವಿನಿ ವೈಷ್ಣವ್