ನವದೆಹಲಿ: ರಾಜಧಾನಿ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ಸೋಮವಾರ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿ ಆತ್ಮಹತ್ಯೆ ಸುದ್ದಿ ತಿಳಿದ ತಕ್ಷಣ ಹಾಸ್ಟೆಲ್‌ನಲ್ಲಿ ಸಂಚಲನ ಮೂಡಿಸಿತ್ತು. ಈ ವಿಷಯವನ್ನು ಪೊಲೀಸರಿಗೆ ರವಾನಿಸಲಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಕಾಲೇಜು ಹಾಸ್ಟೆಲ್‌ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಶವದ ಬಳಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಂದ ಬಂದ ಮಾಹಿತಿ ಪ್ರಕಾರ ವಿದ್ಯಾರ್ಥಿನಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಧ್ಯಾಹ್ನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿತು. ಕೂಡಲೇ ನಮ್ಮ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬ ಹಾಗೂ ಆಕೆಯ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್ ಕೊಠಡಿಯ ತನಿಖೆಗೆ ವಿಧಿವಿಜ್ಞಾನ ತಂಡ ಸಹ ಕರೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿನಿ ಯಾಕೆ ಈ ರೀತಿ ನಡೆದುಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ. ಈ ವಿದ್ಯಾರ್ಥಿನಿ ದೆಹಲಿಯ ದ್ವಾರಕಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಕಾಲೇಜಿಗೆ ರಜೆ ಹಾಕಿ ಈ ವಿದ್ಯಾರ್ಥಿನಿ ತನ್ನ ಮನೆಗೆ ತೆರಳಿದ್ದಳು. ಭಾನುವಾರವಷ್ಟೇ ದ್ವಾರಕಾ ಪ್ರದೇಶದಿಂದ ಮತ್ತೆ ಹಾಸ್ಟೆಲ್‌ಗೆ ಆಗಮಿಸಿದ್ದಳು ಎನ್ನಲಾಗಿದೆ.
ಅದಾದ ನಂತರ ದಿಢೀರನೆ ಏನಾಯ್ತೋ ಏನೋ ಗೊತ್ತಿಲ್ಲ ಈ ಪರಿಸ್ಥಿತಿಯಲ್ಲಿ ಆಕೆಯ ದೇಹ ಸಿಕ್ಕಿದೆ. ಈ ಸಂಬಂಧ ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಇದುವರೆಗೂ ಪೊಲೀಸರಿಗೆ ಸಾವಿನ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ವಿದ್ಯಾರ್ಥಿ ಸಾವಿಗೆ ಕಾರಣ ಏನು ಎಂಬುದು ತಿಳಿಯಲಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ;ರಾಷ್ಟ್ರೀಯ ಹಾಕಿ ಆಟಗಾರನ ವಿರುದ್ಧ ಎಫ್ಐಆರ್