ಮೆಹಬೂಬಾಬಾದ್, ತೆಲಂಗಾಣ: ಮೆಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‌ಬಿಐ ಎಟಿಎಂನಲ್ಲಿ ಭಾನುವಾರ ಮುಂಜಾನೆ ಖದೀಮರು ಭಾರಿ ಕಳ್ಳತನ ಮಾಡಿದ್ದಾರೆ. ತಾಲೂಕು ಕೇಂದ್ರದ ರಾಮಾಲಯ ಬಳಿಯಿರುವ ಎಸ್‌ಬಿಐ ಎಟಿಎಂ ಒಡೆದು 29.70 ಲಕ್ಷ ರೂ.ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಎಟಿಎಂ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕ್ಲೂ ಟೀಮ್‌ನೊಂದಿಗೆ ಮೆಹಬೂಬಾಬಾದ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಆ ಪ್ರದೇಶದಲ್ಲಿದ್ದ ಹಾಗೂ ಬ್ಯಾಂಕ್ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು. ಶುಕ್ರವಾರ ಸಂಜೆ ಈ ಎಟಿಎಂನಲ್ಲಿ 29 ಲಕ್ಷ ರೂಪಾಯಿ ಜಮೆ ಆಗಿರುವುದು ತಿಳಿದು ಬಂದಿದೆ. ಶನಿವಾರ ರಾತ್ರಿ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಾಮ ಮಂದಿರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿರುವುದು ಸಹ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮೊದಲೇ ಪೂರ್ವ ಯೋಜನೆಯಂತೆ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣ ಎರಚಲಾಗಿದೆ. ಆ ಬಳಿಕ ಇಬ್ಬರು ವ್ಯಕ್ತಿಗಳು ಬ್ಯಾಂಕ್ ಒಳಗೆ ಪ್ರವೇಶಿಸಿದ್ದಾರೆ. ಗ್ಯಾಸ್ ಕಟರ್ ಮೂಲಕ ಎಟಿಎಂ ಬಾಗಿಲು ತೆರೆದು 29.70 ಲಕ್ಷ ರೂಪಾಯಿಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಭಾನುವಾರ ಬೆಳಗ್ಗೆ ಹಣ ತೆಗೆಯಲು ಬಂದ ವ್ಯಕ್ತಿಯೊಬ್ಬ ಎಟಿಎಂ ಧ್ವಂಸಗೊಂಡಿರುವುದನ್ನು ನೋಡಿ ಸ್ಥಳೀಯರ ಜತೆಗೂಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಬಯ್ಯಾರಂ ಎಸ್‌ಐ ಉಪೇಂದರ್ ಹಾಗೂ ಮಹಬೂಬಾಬಾದ್ ಎಎಸ್‌ಪಿ ಚೆನ್ನಯ್ಯ, ತಮ್ಮ ತಂಡದ ನೆರವಿನೊಂದಿಗೆ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಘಟನೆ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಯ್ಯ ಮಾತನಾಡಿದ್ದು, ಮಧ್ಯರಾತ್ರಿ ಕಾರಿನಲ್ಲಿ ಬಂದ ಐವರು ಎಟಿಎಂ ಅನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ 25 ರಿಂದ 30 ಲಕ್ಷ ರೂಪಾಯಿವರೆಗೆ ಕಳ್ಳತನ ಮಾಡಿದ್ದಾರೆ. ಇವರೆಲ್ಲರೂ ವೃತ್ತಿಪರ ಗ್ಯಾಂಗ್‌ಗೆ ಸಂಬಂಧಿಸಿದವರು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಾಧಾರಗಳು ಸಿಕ್ಕಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸಿ ಅವರಿಂದ ಹಣ ವಸೂಲಿ ಮಾಡುತ್ತೇವೆ ಎಂದರು.
ಮೇಡಾರಂ ಜಾತ್ರೆಗೆ ತೆರಳುವ ಸಂದರ್ಭದಲ್ಲಿ ಬೆಲೆಬಾಳುವ ಚಿನ್ನ ಹಾಗೂ ಹಣವನ್ನು ಮನೆಯಲ್ಲಿ ಇಡದಂತೆ ಹಾಗೂ ಮಹಿಳೆಯರು ಜಾತ್ರೆಯಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಜನರಿಗೆ ಸೂಚಿಸಲಾಗಿದೆ ಎಂದು ಎಎಸ್ಪಿ ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಓದಿ: ಸಿದ್ದರಾಮಯ್ಯ ವಿರುದ್ಧ ಕೇಸ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್