ನವದೆಹಲಿ: ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್ಪಿಎಫ್ ಶಾಲೆಯ ಬಳಿ ಭಾನುವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 7.50ರ ಸುಮಾರಿಗೆ ಸಂಭವಿಸಿದ ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಸೆಕ್ಟರ್ 14ರಲ್ಲಿರುವ ಸಿಆರ್ಪಿಎಫ್ ಶಾಲೆಯ ಬಳಿಗೆ ಬಾಂಬ್ ಸ್ಕ್ವಾಡ್ ಮತ್ತು ಪೊಲೀಸ್ ವಿಧಿವಿಜ್ಞಾನ ತಂಡಗಳು ಆಗಮಿಸಿವೆ. ಅಪರಾಧ ವಿಭಾಗ ಮತ್ತು ವಿಶೇಷ ಸೆಲ್ ಮತ್ತು ಅಗ್ನಿಶಾಮಕ ದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಶಾಲೆಯ ಗೋಡೆ, ಹತ್ತಿರದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಮತ್ತು ಇಡೀ ಪ್ರದೇಶದ ಸುತ್ತ ಯಾರೂ ಬರದಂತೆ ನಿರ್ಬಂಧ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ಹೊಗೆ ಬರುತ್ತಿರುವುದು ಕಾಣಿಸಿದೆ. ಸ್ಫೋಟದ ನಂತರ ದಟ್ಟವಾದ ಬಿಳಿ ಹೊಗೆ ಕಾಣಿಸಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
#WATCH | Delhi: A blast was heard outside CRPF School in Rohini's Prashant Vihar area early in the morning. Police and FSL team present on the spot. pic.twitter.com/S4ytKNz4cQ
— ANI (@ANI) October 20, 2024
ಈ ಬಗ್ಗೆ ಮಾತನಾಡಿದ ದೆಹಲಿ ಅಗ್ನಿಶಾಮಕ ಸೇವೆ ಅಧಿಕಾರಿಯೊಬ್ಬರು, "ಸಿಆರ್ಪಿಎಫ್ ಶಾಲೆಯ ಆವರಣ ಗೋಡೆಯ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ನಮಗೆ ಕರೆ ಬಂದಿತ್ತು. ನಾವು ತಕ್ಷಣ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿದ್ದೇವೆ. ಸ್ಫೋಟದಿಂದಾಗಿ ಎಲ್ಲಿಯೂ ಬೆಂಕಿ ಹೊತ್ತಿಕೊಂಡಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ. ಹೀಗಾಗಿ ನಮ್ಮ ವಾಹನಗಳು ಸ್ಥಳದಿಂದ ಹಿಂತಿರುಗಿವೆ" ಎಂದು ತಿಳಿಸಿದರು.
"ನಮ್ಮ ವಿಧಿವಿಜ್ಞಾನ ತಂಡ ಮತ್ತು ಅಪರಾಧ ತನಿಖಾ ಘಟಕವು ಸ್ಫೋಟದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಇದೊಂದು ಪಟಾಕಿಯೂ ಆಗಿರಬಹುದು. ಆದರೆ ನಾವು ಇಡೀ ಘಟನೆಯನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ದೊಡ್ಡ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಬೆಳಿಗ್ಗೆ 7.47ಕ್ಕೆ ಪಿಸಿಆರ್ ಕರೆ ಬಂದಿತ್ತು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಪ್ರಶಾಂತ್ ವಿಹಾರ್ ಠಾಣೆಯ ಎಸ್ಎಚ್ಒ ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿದರು. ಸ್ಫೋಟದಿಂದ ಶಾಲೆಯ ಗೋಡೆಗೆ ಹಾನಿಯಾಗಿರುವುದು ಮತ್ತು ಸ್ಥಳದಲ್ಲಿ ಕೆಟ್ಟ ವಾಸನೆ ಹರಡಿರುವುದು ಕಂಡುಬಂದಿದೆ. ಹತ್ತಿರದ ಅಂಗಡಿಯ ಗಾಜುಗಳು ಮತ್ತು ಅಂಗಡಿಯ ಬಳಿ ನಿಲ್ಲಿಸಿದ್ದ ಕಾರು ಹಾನಿಗೊಳಗಾಗಿರುವುದು ಕಂಡುಬಂದಿದೆ. ಯಾರಿಗೂ ಗಾಯಗಳಾಗಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಯನಾಡ್ ಉಪ ಚುನಾವಣೆ: ಪ್ರಿಯಾಂಕಾ ಗಾಂಧಿ ಎದುರು ಬಿಜೆಪಿ ಯುವ ನಾಯಕಿ ನವ್ಯಾ ಹರಿದಾಸ್ ಕಣಕ್ಕೆ